ಗುಂಡ್ಲುಪೇಟೆ: ಪಟ್ಟಣದಲ್ಲಿ ನಿರಂತರವಾಗಿ ಸುರಿದ ಮಳೆಗೆ ಪ್ರಮುಖ ರಸ್ತೆಗಳು ಹದಗೆಟ್ಟಿದ್ದು, ಗುಂಡಿಗಳಿಂದ ತುಂಬಿವೆ. ಪಾದಾಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಪುರಸಭೆ ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಂದ ಶಾಪ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂದಾದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ನೆಹರೂ ಪಾರ್ಕ್‌ನಿಂದ ಕೊತ್ವಾಲ್ ಚಾವಡಿಯವರೆಗೆ ಗುಂಡಿಗಳೇ ತುಂಬಿವೆ. ಮಳೆಯಾದರೆ ಗುಂಡಿಗಳಲ್ಲಿ ನೀರು ತುಂಬಿ, ರಸ್ತೆ ಕೆಸರು ಗದ್ದೆಯಾಗಿ ನಿರ್ಮಾಣಗೊಂಡಿದೆ.
ಪ್ರಮುಖ ರಸ್ತೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹಾಗೂ ಪಾದಾಚಾರಿಗಳು ಸಂಚರಿಸುತ್ತಾರೆ. ಮಳೆಯಿಂದ ಹದಗೆಟ್ಟಿದ್ದರೂ ಪುರಸಭೆ ಅಧಿಕಾರಿಗಳ ಕಣ್ಮುಚ್ಚಿಕುಳಿತಿರುವುದಕ್ಕೆ ಜನರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಸಮರ್ಪಕ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆ ಹುಡುಕಬೇಕಾಗಿದೆ: ಹದಗೆಟ್ಟಿರುವ ರಸ್ತೆಯಲ್ಲಿ ಬರುವ ಪಾದಾಚಾರಿಗಳು, ಏಕಾದರೂ ಈ ರಸ್ತೆಯಲ್ಲಿ ಬರುತ್ತಿದ್ದೇವೋ, ಇದೇನು ರಸ್ತೆಯೇ ಇಲ್ಲ, ಬರಿ ಗುಂಡಿಗಳೇ ಕಾಣುತ್ತಿವೆ. ಇದೇನು ಗುಂಡ್ಲುಪೇಟೆಯೋ ಅಥವಾ ಗುಂಡಿಪೇಟೆಯೋ? ಎಂದು ಪಾದಾಚಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಯಲ್ಲಿ ಗುಂಡಿಗಳಿಲ್ಲ. ಗುಂಡಿಗಳಿಂದಲೇ ರಸ್ತೆ ನಿರ್ಮಾಣವಾಗಿದೆಯೇನೋ ಎನಿಸುತ್ತಿದೆ. ರಸ್ತೆಯನ್ನು ಹುಡುಕಿ ವಾಹನ ಚಾಲನೆ ಮಾಡಬೇಕಿದೆ. ಇಷ್ಟೇಲ್ಲ ಆದರೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಇನ್ನಾದರೂ ಸಂಬಂಧಿಸಿದವರು ಪಟ್ಟಣದ ಪ್ರಮುಖ ರಸ್ತೆಯ ದುಸ್ಥಿತಿ ಅರಿತು ಪುರಸಭೆ ಅಧಿಕಾರಿಗಳು, ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಾವು ಪಟ್ಟಣದಲ್ಲಿ ಇದೀವೋ ಅಥವಾ ಹಳ್ಳಿಯಲ್ಲಿ ಇದೀವೋ ಎಂಬುದೇ ತಿಳಿಯುತ್ತಿಲ್ಲ. ತಾಲೂಕು ಕೇಂದ್ರದ ಪ್ರಮುಖ ರಸ್ತೆಯೇ ಈ ರೀತಿ ಗುಂಡಿ ಬಿದ್ದು, ಕೆಸರು ಗದ್ದೆಯಂತಾಗಿದೆ. ಆದರೂ ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ವಿಷಾದನೀಯ ಸಂಗತಿ.
-ಮಹದೇವು, ಗುಂಡ್ಲುಪೇಟೆ
ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿಯುಂಟಾಗುತ್ತಿರುವುದನ್ನು ಗಮನಿಸಿ ಗುಂಡಿಗಳಿಗೆ ಮಣ್ಣು ಹಾಕಲಾಗಿದೆ. ಮಳೆ ಕಡಿಮೆಯಾದ ನಂತರ ರಸ್ತೆ ದುರಸ್ತಿಗೊಳಿಸಿ ಡಾಂಬರು ಹಾಕಲು ಕ್ರಮ ಕೈಗೊಳ್ಳಲಾಗುವುದು.
-ಎ. ರಮೇಶ್, ಪುರಸಭೆ ಮುಖ್ಯಾಧಿಕಾರಿ, ಗುಂಡ್ಲುಪೇಟೆ