ದೊಡ್ಡಬಳ್ಳಾಪುರ: ವಸತಿಹೀನರಿಗೆ ವಸತಿ ಸೌಕರ್ಯ, ಪೊಲೀಸರ ಕಿರುಕುಳ ತಪ್ಪಿಸಲು ನ್ಯಾಯಾಲಯಗಳ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಬಡ ಪರಿಶಿಷ್ಟರಿಗೆ ಸಾಗುವಳಿ ಜಮೀನು ಬಿಡಿಸಿಕೊಡಬೇಕು ಎಂದು ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಮುನಿಆಂಜನಪ್ಪ ಮಾತನಾಡಿ, ತಾಲೂಕು ಆಡಳಿತದಿಂದ ಶೋಷಿತ ವರ್ಗಗಳಿಗೆ ನ್ಯಾಯ ದೊರಕುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು, ದುರ್ಬಲರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದರಿಂದಾಗಿ ದಲಿತರು, ಬಡವರಿಗೆ ಸೌಲಭ್ಯಗಳು ಸಿಗದಂತಾಗಿದೆ. ಅಧಿಕಾರಿಗಳಿಗೆ ಹಣ ನೀಡಲಾಗದ ಆರ್ಥಿಕ ಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ಅನುಸಾರ ಸಮರ್ಪಕವಾಗಿ ವಸತಿ ಹೀನರಿಗೆ ವಸತಿ ನೀಡಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾ ವಿಮೋಚನಾ ಚಳವಳಿ ತಾಲೂಕು ಅಧ್ಯಕ್ಷ ಮದ್ದೂರಪ್ಪ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಖಾತಾ ದಾಖಲಿಸುವುದು. ಬಡ ಪರಿಶಿಷ್ಟ ರೈತರಿಗೆ ಬಲಾಡ್ಯರಿಂದ ಸಾಗುವಳಿ ಜಮೀನು ಬಿಡಿಸಿಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುರುವರೆಗೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹನುಮಣ್ಣ ಗೂಳ್ಯ ಮಾತನಾಡಿ, ಸಾಸಲು ಹೋಬಳಿಯ ಕನಕೇನಹಳ್ಳಿ ಗ್ರಾಮದಲ್ಲಿರುವ ಎಲ್ಲಾ ಜಾತಿಯ ಬಡವರು ಸರ್ವೇ ನಂ.58ರಲ್ಲಿನ 3 ಎಕರೆ 20 ಗುಂಟೆ ಜಮೀನಿನಲ್ಲಿ ವಸತಿಗಾಗಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದರೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾಡಳಿತ ವಸತಿ ಹೀನ ಬಡವರಿಗೆ ಪೊಲೀಸ್ ಇಲಾಖೆ ನೀಡುತ್ತಿರುವ ಕಿರುಕುಳ ತಪ್ಪಿಸಿ, ಶೋಷಿತರನ್ನು ಒಕ್ಕಲೆಬ್ಬಿಸದಂತೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿದರು.
ಕನಕೇನಹಳ್ಳಿ ಗ್ರಾಮದಲ್ಲಿರುವ ಎಲ್ಲಾ ಜಾತಿಯ ಬಡವರು ಸರ್ವೇ ನಂ.58ರಲ್ಲಿನ 3 ಎಕರೆ 20ಗುಂಟೆ ಜಮೀನಿನಲ್ಲಿ ವಸತಿಗಾಗಿ ಗುಡಿಸಲುಗಳನ್ನು ಕಟ್ಟಿಕೊಳ್ಳಲಾಗಿದೆ. ತಂಬೇನಹಳ್ಳಿ ಗ್ರಾಮದ ಸರ್ವೇ ನಂ. 68/1,68/3ರಲ್ಲಿನ ಜಮೀನುಗಳನ್ನು ನ್ಯಾಯಾಲಯದ ಆದೇಶದಂತೆ ಬಡವರಿಗೆ ಬಿಡಿಸಿಕೊಡಬೇಕು ಎಂದು ಹಕ್ಕೊತ್ತಾಯ ಮಾಡಲಾಯಿತು.
ಬೆಂಗಳೂರು ನಗರ ಅಧ್ಯಕ್ಷ ಅಯೂಬ್‌ಖಾನ್,ಉಪಾಧ್ಯಕ್ಷ ಭೈರಪ್ಪ, ವಿಭಾಗೀಯ ಕಾರ್ಯದರ್ಶಿ ಮುನಿರಾಜ್ ಆಲೂರು, ಕಾರ್ಯದರ್ಶಿಗಳಾದ ಕಾಕೋಳ್ ಚೆನ್ನಮರಿಯಪ್ಪ, ಲಿಂಗಣ್ಣ, ದೊಡ್ಡಬಳ್ಳಾಪುರ ನಗರ ಅಧ್ಯಕ್ಷ ಮಂಜುನಾಥ್, ತಾಲೂಕು ಸಂಘಟನೆ ಕಾರ್ಯದರ್ಶಿ ನೆಲ್ಲುಕುಂಟೆ ಮೂರ್ತಿ, ತಾಲೂಕು ಮಹಿಳಾ ಅಧ್ಯಕ್ಷೆ ರತ್ನಮ್ಮ, ಆಟೋ ಘಟಕದ ಅಧ್ಯಕ್ಷ ಲೋಕೇಶ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಮುಖಂಡರಾದ ಮುನಿಲಕ್ಷ್ಮಮ್ಮ, ಪುಷ್ಪಾ, ಶೀಲಾ, ಸುಲೋಚನಮ್ಮ ಮತ್ತಿತರರಿದ್ದರು.