ರಾಯಚೂರು: ಪೋಡಿ, ಹದ್ದು ಬಸ್ತು, 11ಇ ಸರ್ವೇ ಕಾರ್ಯವನ್ನು ಅನಗತ್ಯ ವಿಳಂಬ ಮಾಡುತ್ತಿದ್ದು, ತ್ವರಿತವಾಗಿ ಮಾಡಿ ಮುಗಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಗುರುವಾರ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಭೂ ಕಂದಾಯ ಅನಿಯಮಗಳ ಪ್ರಕಾರ ಪೋಡಿ, ಹದ್ದುಬಸ್ತು, ತಾತ್ಕಾಲ್ ಪೋಡಿ, 11ಇ ಸರ್ವೇ ಮಾಡಲು ಸಾಕಷ್ಟು ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯಾದ ಮೇಲೆ ಸಾಕಷ್ಟು ದಿನಗಳಾದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಅಲ್ಲದೇ, ನಿಯಮ ಬಾಹಿರವಾಗಿ ಸರ್ವೇ ಮಾಡುತ್ತಿದ್ದು, ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆ ವಿವರಿಸಿದರು.
ಭೂ ಮಾಪಕರು ಜಮೀನುಗಳಿಗೆಬಂದುಅಳತೆಮಾಡದೇ ಕೇವಲ ಹಳೆ ನಕ್ಷೆಗಳನ್ನು ಸಿದ್ಧಪಡಿಸಿ ರೈತರಿಗೆ ನೀಡುತ್ತಿದ್ದಾರೆ. ನೋಟಿಸ್ ನೀಡದೇ ಅಳತೆ ಮಾಡುತ್ತಿದ್ದಾರೆ. ಸರ್ವೇ ಕಾರ್ಯದಲ್ಲೂ ಅಕ್ರಮ ನಡೆಯುತ್ತಿದೆ. ಹಣ ಕೊಟ್ಟರೆ ಬೇಗ ಸರ್ವೇ ಮಾಡುತ್ತಿದ್ದು, ಹಣನೀಡದಿದ್ದರೆ ಅರ್ಜಿಗಳನ್ನೇ ತಿರಸ್ಕರಿಸಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಲಂಚ ಮುಕ್ತಗೊಳಿಸಬೇಕು. ಪೋಡಿ, ಹದ್ದುಬಸ್ತು, ತಾತ್ಕಲ್ ಪೋಡಿ, 11ಇ ಸರ್ವೇ ಪ್ರಕರಣಗಳಲ್ಲಿ ಸಂಬಂಧಿಸಿದ ಎಲ್ಲ ರೈತರಿಗೂ ನೋಟಿಸ್ ಜಾರಿಗೊಳಿಸಿ ಸರ್ವೇ ಕಾರ್ಯ ನಡೆಸಬೇಕು ಎಂದು ಆಗ್ರಹಿಸಿದರು.
ಪರವಾನಗಿ ಭೂ ಮಾಪಕರು ಕಡ್ಡಾಯವಾಗಿ ಕರ್ನಾಟಕ ಭೂ ಕಂದಾಯ ನಿಯಮ ಪಾಲಿಸಬೇಕು, ತಪ್ಪಿತಸ್ಥ ಪರವಾನಗಿ ಭೂ ಮಾಪಕರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಗಿ ರದ್ದುಪಡಿಸಬೇಕು ಹಾಗೂ ಸರ್ಕಾರದ ಆದೇಶದ ಪ್ರಕಾರ ಸರ್ವೇಗೆ ಸಂಬಂಧಿಸಿದ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು. ದಾಖಲಾದ ಮೇಲ್ಮನವಿಗಳನ್ನು ಎರಡು ತಿಂಗಳ ಒಳಗೇ ವಿಚಾರಣೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಂಗನಾಥ ಪಾಟೀಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ದಳವಾಯಿ, ಸದಸ್ಯರಾದ ಕೊಂಡರಾಜು ಹೀರಾಪುರ, ರಮೇಶ ಶಕ್ತಿನಗರ, ಶಂಕರಗೌಡ ಹೀರಾಪುರ ಸೇರಿ ಇತರರಿದ್ದರು.