ಯಾದಗಿರಿ: ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ಇರುವ ಬೇಡ, ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಲು ವಿನಾಕಾರಣ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ತಡೆದು ತಕ್ಷಣ ಸರ್ಕಾರದ ಆದೇಶಗಳಂತೆ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ವೇದಿಕೆ ಕಾರ್ಯಾಧ್ಯಕ್ಷ ವೈಜನಾಥ ಹಿರೇಮಠ ಒತ್ತಾಯಿಸಿದರು.
ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಬನದ ವೀರೇಶ್ವರ ಕಲ್ಯಾಣ ಮಂಟಪದಿಂದ ಹೊರಟ ಬೈಕ್ ರ್ಯಾಲಿ ತಹಶೀಲ್ದಾರ್ ಕಚೇರಿ ಎದುರು ಜಮಾಯಿಸಿದ್ದ ನಂತರ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಬೇಡ ಜಂಗಮರು ಎಂದರೆ ಯಾರು ಎಂದು ತಿಳಿಯಲು ಸರ್ಕಾರ ನಿಯೋಜಿಸಿದ್ದ ಡಾ| ಸೂರ್ಯನಾಥ ಕಾಮತ್ ಅವರ ನೇತೃತ್ವದ ಸಮಿತಿ ವಡಗೇರಾಗೆ ಭೇಟಿ ನೀಡಿತ್ತು. ಇಲ್ಲಿಯೂ ಪರಿಶೀಲನೆ ನಡೆಸಿ, ಇಲ್ಲಿ ಬೇಡ ಜಂಗಮರಿದ್ದಾರೆ ಎಂದು ವರದಿ ನೀಡಿದೆ. ಹಿರೇಮಠ, ಸಾಲಿಮಠ, ಮಠಪತಿ ಎಂದು ಗುರ್ತಿಸಿಕೊಂಡಿದ್ದಾರೋ ಅವರೇ ಬೇಡ ಜಂಗಮರು ಎಂದು ಈ ಸಮಿತಿ ವರದಿ ಹೇಳಿದೆ. ಆದರೆ ವಡಗೇರಾ ತಹಸೀಲ್ದಾರ್ ಇಲ್ಲಿ ಬೇಡ ಜಂಗಮರು ಇಲ್ಲ ಎಂದು ಹಿಂಬರಹ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1901ರಲ್ಲಿಯೇ ನಿಜಾಮ ಸರ್ಕಾರದಲ್ಲಿ ಬೇಡ ಜಂಗಮರು ಸೌಲತ್ತು ಪಡೆಯುತ್ತಿದ್ದರು. ತದನಂತರ 1950ರಲ್ಲಿ ಡಾ| ಅಂಬೇಡ್ಕರ್ ಅವರು ಸಹ ಅಧ್ಯಯನ ಮಾಡಿ ಬೇಡ ಜಂಗಮರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಿ ಸೌಲತ್ತು ಕೊಡಲು ಶಿಫಾರಸು ಮಾಡಿದ್ದರೂ ಸಹ ಇಂದಿಗೆ 65 ವರ್ಷಗಳೇ ಕಳೆದರೂ ಬೇಡ ಜಂಗಮರಿಗೆ ಈ ಸೌಲತ್ತು ಬಳಸಿಕೊಳ್ಳಲು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಬಿಡುತ್ತಿಲ್ಲ ಎಂದರು.
ಬಳಿಕ ವಡಗೇರಾ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೇಡ ಜಂಗಮ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶರಣ ಬಸವ ಸ್ವಾಮಿ ಬದ್ದೇಪಲ್ಲಿ ಮನವಿ ಸಲ್ಲಿಸಿದರು. ಬಿ.ಬಿ. ಸ್ವಾಮಿ, ಪಂಪಯ್ಯ ಸ್ವಾಮಿ ವಡಗೇರಾ, ಗೌರಿಶಂಕರ ಹಿರೇಮಠ, ಸೊಮಶೇಖರಯ್ಯ ಸ್ವಾಮಿ ರುದ್ರಮುನಿ ಬೆಂಡೆಬೆಂಬಳಿ, ಸೋಮಶೇಖರ ರೊಟ್ನಡಿಗಿ ಇದ್ದರು.