Advertisement

ಪತಿ, ಪತ್ನಿ ಒಂದೇ ಕಡೆ ಸೇವೆ ಸಲ್ಲಿಸಲು ಸರಕಾರಕ್ಕೆ ಮನವಿ: ಡಿಜಿಪಿ

08:40 PM Oct 31, 2022 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಂಪತಿ ಒಂದೇ ಜಿಲ್ಲೆ, ಒಂದೇ ಘಟಕ ಅಥವಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದರು.

Advertisement

ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಸೋಮವಾರ ಸೇವಾ ಕವಾಯತು ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಪೊಲೀಸ್‌ ಇಲಾಖೆಯಲ್ಲಿ ಈ ಮೊದಲು ಪತಿ, ಪತ್ನಿ ಒಂದೇ ಕಡೆ ಕರ್ತವ್ಯ ನಿರ್ವಹಿಸಲು ಅವಕಾಶವಿತ್ತು. ಅನಂತರ ಕಾರಣಾಂತರಗಳಿಂದ ತೆಗೆದು ಹಾಕಲಾಗಿತ್ತು. ಸದ್ಯ ಕನಿಷ್ಠ 7 ವರ್ಷಗಳ ಕಾಲ ಒಟ್ಟಿಗೆ ಸೇವೆ ಸಲ್ಲಿಸಲು ಅವಕಾಶ ಕೊರಲಾಗಿದೆ. ಅನಂತರ ವಿಭಾಗ ಬದಲಾವಣೆ ಮಾಡಬೇಕು. ಅದಕ್ಕೆ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.

ಮುಂದಿನ ಆರೇಳು ತಿಂಗಳಲ್ಲಿ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಇಲಾಖೆ ಸಿಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈ ಹಿಂದೆ ಪಿಎಫ್ಐ ನಿಷೇಧ, ಗಣೇಶ, ದೀಪಾವಳಿ ಹಬ್ಬದಲ್ಲಿ, ಗಣ್ಯ ವ್ಯಕ್ತಿಗಳ ಆಗಮನ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಅಭಿನಂದನೆಗಳು ಎಂದರು.

ಹೊಸ ಠಾಣೆ, ವಾಹನ
ಬೆಂಗಳೂರು ಸಹಿತ ರಾಜ್ಯದಲ್ಲಿ 116 ಹೊಸ ಪೊಲೀಸ್‌ ಠಾಣೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 2023ರ ಅಂತ್ಯದ ವೇಳೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಠಾಣೆಗಳಿಗೆ ಮುಕ್ತಿ ನೀಡಲಾಗುತ್ತದೆ. ಹಾಗೆಯೇ 78 ಕೋಟಿ ರೂ. ವೆಚ್ಚದಲ್ಲಿ ಪೊಲೀಸರಿಗಾಗಿ ಹೊಸ ವಾಹನ ಖರೀದಿಸಲಾಗುತ್ತದೆ ಎಂದು ಹೇಳಿದರು.
ಹತ್ತಾರು ವರ್ಷಗಳ ಹಳೆ ಆಯುಧಗಳನ್ನು ವಿಲೇವಾರಿ ಮಾಡಲಾಗಿದೆ. ಜತೆಗೆ ಹೊಸ ಆಯುಧಗಳು ಮತ್ತು ಶಸ್ತ್ರಾಸ್ತ್ರಗಳ ಖರೀದಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next