Advertisement

ನದಿ ನೀರು ನಿರ್ವಹಣೆಗೆ ಜಂಟಿ ಸಮಿತಿ ರಚಿಸಲು ಮನವಿ

11:37 PM Oct 11, 2019 | Lakshmi GovindaRaju |

ವಿಧಾನಪರಿಷತ್‌: “ಉತ್ತರ ಕರ್ನಾಟಕದಲ್ಲಿ ನದಿ ನೀರಿನ ಸಮರ್ಪಕ ಬಳಕೆ ಹಾಗೂ ಪ್ರವಾಹ ಭೀತಿ ತಪ್ಪಿಸುವ ಉದ್ದೇಶದಿಂದ ಕೃಷ್ಣಾ, ಕೋಯ್ನಾ , ಭೀಮಾ ಸೇರಿ ಕರ್ನಾಟಕ-ಮಹಾರಾಷ್ಟ್ರ ಭಾಗದ ನದಿಗಳ ನೀರಿನ ನಿರ್ವಹಣೆಗೆ ಜಂಟಿ ಸಮಿತಿ ರಚನೆ ಮಾಡಿ’ ಎಂದು ಕಾಂಗ್ರೆಸ್‌ ಸದಸ್ಯ ಬಸವರಾಜ ಇಟಗಿ ಸರ್ಕಾರಕ್ಕೆ ಮನವಿ ಮಾಡಿದರು.

Advertisement

ನೆರೆ ಪರಿಹಾರದ ಚರ್ಚೆ ವೇಳೆ ವಿಷಯ ಮಂಡನೆ ಮಾಡಿದ ಅವರು, ಈ ಎಲ್ಲ ನದಿಗಳ ನೀರಿನ ನಿರ್ವಹಣೆಗೆ ಜಂಟಿ ಸಮಿತಿ ರಚನೆ ಮಾಡಲೇ ಬೇಕು. ಪ್ರತಿ ವರ್ಷ ಪ್ರವಾಹ ಬಂದಾಗಲೂ ಸೇತುವೆಗಳು ಮುಳುಗುತ್ತವೆ. ಆದ್ದರಿಂದ ನೀರಿನ ನಿರ್ವಹಣೆ ಅತೀ ಅಗತ್ಯ. ಈ ಎಲ್ಲ ನದಿ ಪಾತ್ರದಲ್ಲಿ ಪ್ರವಾಹ ಬರುತ್ತಿರುವುದರಿಂದ ಇದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಮಹಂತೇಶ ಕವಟಗಿ ಮಠ, ಮಹಾರಾಷ್ಟ್ರ ಮತ್ತು ಕರ್ನಾಟಕ ನದಿ ನೀರಿನ ನಿರ್ವಹ ಣೆಗಾಗಿ ಜಂಟಿ ಸಮಿತಿ ರಚನೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ನೀರು ನಿರ್ವಹಣಾ ಸಮಿತಿ ಮಾಡದಿದ್ದರೆ ಉ.ಕ. ಭಾಗದ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ ಎಂದು ತಿಳಿಸಿದರು.

ಪರಿಹಾರ ಹೆಚ್ಚಿಸಿ: ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಮಾತನಾಡಿ, ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ ಬೆಳೆ ನಾಶವಾಗಿದೆ, ಭೂ ಕುಸಿತದಿಂದ ಮನೆ, ಶಾಲೆಗಳು ನಾಶವಾಗಿವೆ. ಒಟ್ಟಾರೆ ಲಕ್ಷಾಂತರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ, ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ದಾಖಲೆ ಒದಗಿಸಿ ಎಂದಾಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಗದ್ದಲ ಏರ್ಪಟ್ಟಿತು. ಕಾಂಗ್ರೆಸ್‌ ಪಕ್ಷದಿಂದ ಬಿಡುಗಡೆ ಮಾಡಿರುವ ನೆರೆ ಅಧ್ಯಯನ ವರದಿಯನ್ನು ಸದನದಲ್ಲಿ ಈ ವೇಳೆ ಪ್ರದರ್ಶಿಸಲಾಯಿತು.

ಆಗ ಸಭಾ ನಾಯಕ ಶ್ರೀನಿವಾಸ ಪೂಜಾರಿ, ಪಕ್ಷದ ವರದಿಯನ್ನು ಸದನದಲ್ಲಿ ಪ್ರದರ್ಶಿಸುವ ಅಗತ್ಯವಿಲ್ಲ. ನಿಮ್ಮ ಆರೋಪಪಟ್ಟಿಯನ್ನು ಪಕ್ಷದ ವೇದಿಕೆಯಲ್ಲಿ ಬಿಡುಗಡೆ ಮಾಡಿ ಎಂದರು. ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ ಮಾತನಾಡಿ, ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತಿದ್ದೀರಿ. ಇದೆಲ್ಲ ದಕ್ಕೂ ನೀವೇ ಕಾರಣ ಎಂದು ಆಡಳಿತ ಪಕ್ಷದ ಕಡೆಗೆ ಬೊಟ್ಟು ಮಾಡಿದರು. ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಪ್ರತಿಪಕ್ಷಕ್ಕೆ ಎಷ್ಟು ಮಾನ್ಯತೆ ನೀಡಿದ್ದೀರಿ ಎಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.

Advertisement

ಮಧ್ಯವಾರ್ಷಿಕ ಪರಿಶೀಲನಾ ವರದಿ ಮಂಡನೆ: ಮೇಲ್ಮನೆ ಕಲಾಪ ಆರಂಭದಲ್ಲಿಯೇ ಮುಖ್ಯಮಂತ್ರಿಗಳ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, 2019-20 ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಮಂಡಿಸಿದರು. ನಂತರ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ 2018-19 ನೇ ಸಾಲಿನ ವರದಿ ಮಂಡಿಸಿದರು.

ನೆರೆ ಚರ್ಚೆಯಲ್ಲಿ ಸವಾಲು ಮತ್ತು ಕಳಕಳಿ!
ವಿಧಾನ ಪರಿಷತ್‌: ಪ್ರವಾಹ ಪರಿಹಾರ ಮತ್ತು ಸಂತ್ರಸ್ತರ ಕುರಿತು ಆಡಳಿತ ಮತ್ತು ಪ್ರತಿಪಕ್ಷದ ನಡುವೆ “ಸವಾಲು ಮತ್ತು ಕಳಕಳಿ” ಬಗ್ಗೆ ಕೆಲಕಾಲ ಚರ್ಚೆ ನಡೆಯಿತು. ಜೆಡಿಎಸ್‌ ಸದಸ್ಯ ಶ್ರೀಕಂಠೇಗೌಡ ವಿಷಯ ಪ್ರಸ್ತಾಪಿಸಿ, “ಪ್ರಕೃತಿ ವಿಕೋಪ ಅಥವಾ ಯಾವುದೇ ರೀತಿಯ ಪ್ರವಾಹವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ, ಅದರ ಪರಿಹಾರ ಕಾರ್ಯ ತುರ್ತಾಗಿ ನಡೆಸುವುದನ್ನು ಸರ್ಕಾರ ಸವಾಲಾಗಿ ಸ್ವೀಕರಿಸಬೇಕು’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, “ಇದರಲ್ಲಿ ಸವಾಲು ಏನೂ ಇಲ್ಲ. ನಾವು ಚುನಾವಣೆಯಲ್ಲಿ ಸವಾಲು ಎದುರಿಸಿದ್ದೇವೆ.

ಆ ಸವಾಲನ್ನು ಗೆದ್ದಿದ್ದೇವೆ. ಪರಿಹಾರ ವಿಚಾರದಲ್ಲಿ ಸವಾಲು ಸ್ವೀಕರಿಸಿ ಎನ್ನುವುದು ಧಿಮಾಕಿನ ಮಾತು, ಕಳಕಳಿ ಎಂದರೆ ಹೃದಯದ ಮಾತು. ಇದರಲ್ಲಿ ನಿಮ್ಮದು ಯಾವುದು’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಪಕ್ಷದ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಈಗ ಸರ್ಕಾರ ಹೇಗೆ ನಡೆಯುತ್ತಿದೆ ಮತ್ತು ಹೇಗೆ ರಚನೆಯಾಗಿದೆ ಎಂಬುದು ಗೊತ್ತಿದೆ ಎಂದರು. “ಈ ಸರ್ಕಾರ ಅನೈತಿಕತೆಯಿಂದ ನಡೆಯುತ್ತಿದೆ’ ಎಂಬ ಎಚ್‌.ಎಂ.ರೇವಣ್ಣ ಹೇಳಿಕೆಗೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, “17 ಶಾಸಕರು ರಾಜೀನಾಮೆ ನೀಡುವಂತೆ ಮಾಡಿದ್ದೇ ನಿಮ್ಮ ಸವಾಲೆ’ ಎಂದು ಚುಚ್ಚಿದರು.

ನೀವು ರಾಜೀನಾಮೆ ನೀಡಲು ಸಾಧ್ಯವೇ?: “ನೆರೆ ವಿಚಾರವಾಗಿ ನಾನು ಪ್ರಸ್ತಾಪಿಸಿರುವ ಯಾವುದೇ ಅಂಕಿಅಂಶ ತಪ್ಪಿದ್ದರೂ, ಸದನ ಸಮಿತಿ ರಚನೆ ಮಾಡಿ ತನಿಖೆ ನಡೆಸಲಿ, ಸಣ್ಣ ಲೋಪ ಕಂಡುಬಂದರೂ ರಾಜೀನಾಮೆಗೆ ಸಿದ್ಧನಿದ್ದೇನೆ’ ಎಂದು ಜೆಡಿಎಸ್‌ ಸದಸ್ಯ ಶ್ರೀಕಂಠೇಗೌಡ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌, “ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅನೇಕ ಬಾರಿ ರಾಜೀನಾಮೆ ವಿಚಾರ ಉಲ್ಲೇಖೀಸಿದ್ದರು. ಅವರೇ ರಾಜೀನಾಮೆ ಕೊಟ್ಟಿರಲಿಲ್ಲ. ಇನ್ನು ನೀವು ರಾಜೀನಾಮೆ ನೀಡುತ್ತೀರೇ’ ಎಂದು ಕಾಲೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next