ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆಯಿಂದ ಚರ್ಚ್ ರಸ್ತೆ ಸೇತುವೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ಕಾಮಗಾರಿ ಆರ್ಧಕ್ಕೆ ನಿಂತಿದ್ದು ಅದನ್ನು ಪೂರ್ಣಗೊಳಿಸಬೇಕು ಎಂದು ಪುರಸಭೆ ವ್ಯಾಪ್ತಿ ಯವರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ನೀಡಿದ್ದಾರೆ.
ಈ ಭಾಗದಲ್ಲಿರುವ ರೈಸ್ ಮಿಲ್, ಸಾಮಿಲ್ ಸಮೀಪ ಜಾಗದ ಸಮಸ್ಯೆಯಿದ್ದು ಕಾಮಗಾರಿ ಸ್ಥಗಿತಗೊಂಡಿದೆ. ಸ್ಥಳೀಯರೊಂದಿಗೆ ಚರ್ಚಿಸಿದಾಗ ವರ್ತುಲ ರಸ್ತೆ ಮೊದಲಿನ ನೀಲಿನಕ್ಷೆಯಂತೆ ಹೋಗುವುದಿದ್ದರೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಒಬ್ಬರಿಗೋಸ್ಕರ ರಿಂಗ್ ರಸ್ತೆಯ ನೀಲಿನಕ್ಷೆಯನ್ನೇ ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ.
ನಮಗೆ ಮೊದಲಿನ ಮಾದರಿಯಂತೆ ರಸ್ತೆ ನಿರ್ಮಾಣಗೊಳ್ಳಬೇಕೆಂದು ಸ್ಥಳೀಯರ ಬೇಡಿಕೆಯಿಟ್ಟರು.ಬಂದರು ಅಧಿಕಾರಿ ಅವರು ಬಂದರು ಸ್ಥಳವನ್ನು ಪ್ರತಿ ವರ್ಷ ಮರದ ದಿನ್ನೆ ಹಾಕಲು 11 ತಿಂಗಳಿಗೆ ಗುತ್ತಿಗೆ ನೀಡಿದ್ದು, ಈ ಪ್ರಕ್ರಿಯೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಸಾರ್ವಜನಿಕರಿಗೆ ಉಪಯೋಗ ಆಗುವುದಾದರೆ ಮಿಲ್‌ನವರಿಗೂ ತೊಂದರೆಯಾಗದ ರೀತಿ ಅಲ್ಲಿಯೇ ಪರ್ಯಾಯ ಸ್ಥಳ ಇದ್ದಲ್ಲಿ ಅವರಿಗೆ ತಿಳಿವಳಿಕೆ ಹೇಳಿ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪುರಸಭೆ ವ್ಯಾಪ್ತಿಯ ಈ ವರ್ತುಲ ರಸ್ತೆ ಸಂಪೂರ್ಣವಾದಲ್ಲಿ ನಾಗರಿಕರಿಗೆ ತುಂಬಾ ಅನುಕೂಲವಾಗುತ್ತದೆ. ಇದೇ ಮಾರ್ಗವಾಗಿ ಕೋಡಿಯ ಸೀವಾಕ್ ಕಡೆಗೆ ಹೋಗಲು ಅತೀ ಹತ್ತಿರದ ರಸ್ತೆ ಕೂಡ ಆಗಿದೆ. ಮದ್ದುಗುಡ್ಡೆಯಿಂದ ಚರ್ಚ್ ರಸ್ತೆ ಸೇತುವೆ ಸಂಪರ್ಕ ಆಗುವ ವರ್ತುಲ ರಸ್ತೆಯನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಿ ಡಾಮರೀಕರಣ ಮಾಡಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ಮದ್ದುಗುಡ್ಡೆ ಸಾರ್ವಜನಿಕರ ಅಹವಾಲನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ಶಾಸಕರಿಗೆ ನೀಡಿದ ಮನವಿಯಲ್ಲಿ ವಿವರಿಸಲಾಗಿದೆ.