Advertisement

ರಸ್ತೆ-ಚರಂಡಿ ಪೂರ್ಣಗೊಳಿಸಲು ಆಗ್ರಹ

03:13 PM Jun 16, 2020 | Suhan S |

ಕುಷ್ಟಗಿ: ಸರ್ವೀಸ್‌ ರಸ್ತೆ ಅಭಿವೃದ್ಧಿ, ಚರಂಡಿ ಅವೈಜ್ಞಾನಿಕ ಜೋಡಣೆ ಇತ್ಯಾದಿ ಕೆಲಸವನ್ನು ಬಾಕಿ ಉಳಿಸಿಕೊಂಡು ತರಾತುರಿಯಲ್ಲಿ ಹೆದ್ದಾರಿ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಮೇಲ್ಸೇತುವೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿ, ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಕಪ್ಪು ಪಟ್ಟಿ ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿರುವುದು ಗೊಂದಲಕ್ಕೆ ಕಾರಣವಾಯಿತು.

Advertisement

ಈ ವಿಷಯ ತಿಳಿಯುತ್ತಿದ್ದಂತೆ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು, ಹಳೆ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಸಂಘಟನೆಯವರೊಂದಿಗೆ ಚರ್ಚಿಸಿ, ಅಹವಾಲು ಆಲಿಸಿದರು. ಈ ವೇಳೆ ಸಂಘಟನೆಯವರು, ಹೆದ್ದಾರಿ ಮೇಲ್ಸೇತುವೆ ಅಭಿವೃದ್ಧಿ ಜೊತೆಯಲ್ಲಿ ಸರ್ವಿಸ್‌ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಿತ್ತು. ಲೋಕಾರ್ಪಣೆ ನಂತರ ಒಎಸ್‌ಇ ಕಂಪನಿಯವರು ಕೇಳುವುದಿಲ್ಲ. 7 ವರ್ಷಗಳ ಹಿಂದೆ ಕಡೇಕೊಪ್ಪ, ವಣಗೇರಾ ಕೆಳಸೇತುವೆ ಸರ್ವಿಸ್‌ ರಸ್ತೆ ಇನ್ನಷ್ಟು ಹದಗೆಟ್ಟಿದ್ದು, ಜನ ಸಂಚರಿಸದಂತಹ ಪರಿಸ್ಥಿತಿ ಇದೆ. ಹೆದ್ದಾರಿ ಕಡೆ ಗಮನ ಹರಿಸುತ್ತಾರೆಯೇ ವಿನಃ ಸರ್ವೀಸ್‌ ರಸ್ತೆಯ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಂಸದರು, ಒಎಸ್‌ಇ ಕಂಪನಿ ಯೋಜನಾ ವ್ಯವಸ್ಥಾಪಕ ರಾಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು, ಎರಡು ತಿಂಗಳ ಗಡವು ನಿಡುತ್ತಿದ್ದು, ಬಾಕಿ ಇರುವ ಕೆಲಸ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಇದೇ ವೇಳೆ ಮಾಜಿ ಶಾಸಕ ಕೆ. ಶರಣಪ್ಪ, ಸಿಪಿಐ ಚಂದ್ರಶೇಖರ ಜಿ., ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಇದ್ದರು.

ಪುಂಡಲೀಕಪ್ಪ ಜ್ಞಾನಮೋಠೆಹೆಸರು: ಜೂ.16ರಂದು ಉಪ ಮುಖ್ಯಮಂತ್ರಿ ಗೋವಿಂದ್‌ ಕಾರಜೋಳ ಅವರಿಂದ ಲೋಕಾರ್ಪಣೆಗೊಳ್ಳಲಿರುವ ಮೇಲ್ಸೇತುವೆಗೆ ಇಲ್ಲಿನ ಸ್ವಾತಂತ್ರ್ಯ ಸೇನಾನಿ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಠೆ ಅವರ ಹೆಸರನ್ನಿಡಲು ಸಮ್ಮತಿ ವ್ಯಕ್ತವಾಯಿತು. ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಕೆ.ಶರಣಪ್ಪ ಅವರ ಸಮಕ್ಷಮದಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು, ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಸಕ್ರಿಯರಾಗಿದ್ದ ಪುಂಡಲೀಕಪ್ಪ ಜ್ಞಾನಮೋಠೆ ಅವರು, ತಾಲೂಕಿನ ಹೆಮ್ಮೆ ಆಗಿದ್ದಾರೆ. ಎರಡು ಬಾರಿ ಶಾಸಕರಾಗಿ, ಜನಾನುರಾಗಿಯಾಗಿರುವ ಅವರ ಸೇವೆ ಸ್ಮರಣಿನೀಯವಾಗಿ ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಮೇಲ್ಸೇತುವೆಗೆ ಅವರ ಹೆಸರನ್ನಿಡಬೇಕಿದೆ ಎಂದು ಪ್ರಸ್ತಾಪಿಸಿ, ಅಲ್ಲಿದ್ದ ಸಂಘನೆಕಾರರ ಅಭಿಪ್ರಾಯ ಕೇಳಿದರು. ಆಗ ಕೂಡಲೇ ಸಮ್ಮತಿ ವ್ಯಕ್ತವಾಗಿ ಚಪ್ಪಾಳೆ ಮೂಲಕ ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next