ಶಹಾಪುರ: ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಇತಿಹಾಸ ತಿರುಚುವ ಕೆಲಸ ಮಾಡಿದ್ದು, ಡಾ| ಅಂಬೇಡ್ಕರ್ ಅವರ ಕುರಿತು ಗೌರವ ಪೂರ್ಣವಾದ ಸಂವಿಧಾನ ಶಿಲ್ಪಿ ಪದವನ್ನು ಸಹ ತೆಗೆದು ಹಾಕಿರುವುದು ನೋಡಿದರೆ, ಪ್ರಸ್ತುತ ಸರ್ಕಾರದ ರಾಜಕೀಯ ಮನಸ್ಥಿತಿ ಅರ್ಥ ಆಗಲಿದೆ. ಕೂಡಲೇ ನೂತನ ಪಠ್ಯ ಮಕ್ಕಳಿಗೆ ಶಿಕ್ಷಣ ಕೊಡಬೇಡಿ. ಈ ಮೊದಲಿನ ಹಳೇ ಪುಸ್ತಕ ಪ್ರಕಾರವೇ ಮಕ್ಕಳು ಶಿಕ್ಷಣ ಪಡೆಯಲಿ ಎಂದು ಡಿಎಸ್‌ಎಸ್ ಮುಖಂಡ ಶಿವಪುತ್ರ ಜವಳಿ ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿ ಮುಂದೆ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ನಡೆದ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಠ್ಯ ಪುಸ್ತಕ ಮರು ಪರಿಷ್ಕರಣೆ ಸಮಿತಿಯಲ್ಲಿ ಹೆಚ್ಚಿನವರು ಬ್ರಾಹ್ಮಣರಿದ್ದು, ಇವರೆಲ್ಲ ಹಿಂದುಳಿದ, ದಲಿತ ಸಮುದಾಯದ ಮಹಾನ್ ವ್ಯಕ್ತಿಗಳ ಮಹಾತ್ಮರ ಚರಿತ್ರೆಯನ್ನು ತಿರುಚುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಚಕ್ರತೀರ್ಥ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಆತನ ವಿಕೃತ ನಡವಳಿಕೆ ಕುರಿತು ಸಾಕಷ್ಟು ವಿಚಾರಗಳು ಬಯಲಾಗಿವೆ. ಆತನ ಮನಸ್ಥಿತಿ ಏನೆಂಬುದು ಗೊತ್ತಾಗಿದೆ. ಇಂತಹ ಕೀಳು ಮಟ್ಟದ ವ್ಯಕ್ತಿತ್ವ ಹೊಂದಿದ ಚಕ್ರತೀರ್ಥನನ್ನು ಪಠ್ಯ ಪುಸ್ತಕ ಪರಿಷ್ಕರಣೆ ನೇತೃತ್ವ ನೀಡಿರುವುದು ಆಘಾತಕಾರಿ ವಿಷಯವಾಗಿದೆ. ಈ ಕೂಡಲೇ ಸರ್ಕಾರ ಸಮರ್ಪಕ ಪರಿಶೀಲನೆ ನಡೆಸುವ ಮೂಲಕ ಹೊಸ ಪಠ್ಯ ಪರಿಷ್ಕರಣೆ ಕೈಬಿಟ್ಟು ಹಳೇ ಪುಸ್ತಕವೇ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಅಲ್ಲದೇ ಶಿಕ್ಷಣ ಸಚಿವ ಬಿ. ನಾಗೇಶ ಅವರನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದರು. ಪಠ್ಯ ಪರಿಷ್ಕರಣೆಯಲ್ಲಿ ಇಲ್ಲ ಸಲ್ಲದ ವಿಷಯಗಳನ್ನು ಬಿತ್ತರಿಸುವ ಮೂಲಕ ಮಕ್ಕಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಈ ಕೂಡಲೇ ನೂತನ ಪಠ್ಯವನ್ನು ರದ್ದುಗೊಳಿಸಿ ಈ ಮೊದಲಿನ ಪಠ್ಯವನ್ನೇ ಮಕ್ಕಳ ಓದಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಒಕ್ಕೂಟದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಹುರಸಗುಂಡಗಿ, ಮುಖಂಡರಾದ ಶಿವಕುಮಾರ ತಳವಾರ, ಮರೆಪ್ಪ ಕ್ರಾಂತಿ, ಬಾಲರಾಜ ಖಾನಾಪುರ, ಮಲ್ಲಪ್ಪ ಪೂಜಾರಿ, ಲಕ್ಷ್ಮಣ ರಸ್ತಾಪುರ, ವಾಸು ಕೋಗಿಲಕರ್, ಸಂದೀಪ ಹುರಸಗುಂಡಗಿ, ಭೀಮಾಶಂಕರ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ಸಂತೋಷ ಗುಂಡಳ್ಳಿ ಇತರರಿದ್ದರು.