Advertisement

ಅವಿಶ್ವಾಸಕ್ಕೆ ವಿಶೇಷ ಸಭೆ ಕರೆಯುವಂತೆ ಮನವಿ

04:06 PM May 19, 2020 | Suhan S |

ಕೊಪ್ಪಳ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ವಿರುದ್ದ ಅವಿಶ್ವಾಸ ಮಂಡನೆಗೆ ಕಾಂಗ್ರೆಸ್‌ ನಾನಾ ರಣತಂತ್ರ ರೂಪಿಸುತ್ತಿದ್ದು, ಕೈ ಸದಸ್ಯರಿಗೆ, ಕಮಲದವರೇ ಜೈ ಎಂದಿದ್ದಾರೆ. ಇನ್ನು ಅವಿಶ್ವಾಸಕ್ಕೆ ವಿಶೇಷ ಸಭೆ ಕರೆಯುವಂತೆ ಕಾಂಗ್ರೆಸ್‌ನ ಜಿಪಂ ಸದಸ್ಯರು ಅಧ್ಯಕ್ಷ ವಿಶ್ವನಾಥರಡ್ಡಿ ಅವರಿಗೆ ಮನವಿ ಸಲ್ಲಿಸಲು ಮುಂದಾದ ತಕ್ಷಣ ಅಧ್ಯಕ್ಷರು ಮನವಿ ಸ್ವೀಕರಿಸಲು ನಿರಾಕರಣೆ ಮಾಡಿದ ಪ್ರಸಂಗವೂ ನಡೆದಿದೆ.

Advertisement

ಇಲ್ಲಿನ ಜಿಪಂ ವಿಶೇಷ ಕೊಠಡಿಯಲ್ಲಿ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ನೇತೃತ್ವದ ಸದಸ್ಯರ ತಂಡ ಅಧ್ಯಕ್ಷ ವಿಶ್ವನಾಥರಡ್ಡಿ ಅವರಿಗೆ ಅವಿಶ್ವಾಸಕ್ಕೆ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿತು. ಆದರೆ ವಿಶ್ವನಾಥರಡ್ಡಿ ಅವರು ತಮ್ಮ ವಿರುದ್ದ ಅವಿಶ್ವಾಸಕ್ಕೆ ಸಲ್ಲಿಸುವ ಮನವಿ ಸ್ವೀಕಾರಕ್ಕೆ ನಿರಾಕರಣೆ ಮಾಡಿ ಕೊಠಡಿಯಿಂದ ಹೊರನಡೆದರು. ಇದರಿಂದ ಕೈ ಸದಸ್ಯರು ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿ ಸ್ವೀಕೃತಿ ಪ್ರತಿ ಪಡೆದರು. ಇನ್ನು ಜಿಪಂ ಸಿಇಒ ರಘುನಂದನ್‌ ಮೂರ್ತಿ ಅವರಿಗೆ ಕೈ ಸದಸ್ಯರೇ ಮತ್ತೂಂದು ಮನವಿ ಸಲ್ಲಿಸಿ ಅಧ್ಯಕ್ಷರ ವಿರುದ್ದ ಅವಿಶ್ವಾಸಕ್ಕೆ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿದರು.

ಮನವಿಗೆ ಬಿಜೆಪಿ ಸದಸ್ಯರ ಸಹಿ: ಕಾಂಗ್ರೆಸ್‌ ಸದಸ್ಯರು ಹೇಗಾದರೂ ಮಾಡಿ ಅಧ್ಯಕ್ಷ ವಿಶ್ವನಾಥರಡ್ಡಿ ಅವರನ್ನು ಗಾದಿಯಿಂದ ಕೆಳಗೆ ಇಳಿಸಬೇಕೆಂದು ಪ್ರಯತ್ನ ನಡೆಸಿದ್ದಾರೆ. ಆದರೆ, ಅಧ್ಯಕ್ಷ ವಿಶ್ವನಾಥರಡ್ಡಿ ಅವರು ಕಮಲದ ಬೆನ್ನು ಬಿದ್ದು ತಮ್ಮ ಗಾದಿ ಉಳಿವಿಗೆ ನಾನಾ ಕಸರತ್ತು ನಡೆಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನ 17 ಸದಸ್ಯರಿದ್ದು ಅಧ್ಯಕ್ಷರನ್ನು ಹೊರತುಪಡಿಸಿ 16 ಸದಸ್ಯರು ಉಳಿಯಲಿದ್ದಾರೆ. ಬಿಜೆಪಿ 11 ಸದಸ್ಯರಿದ್ದು, ಓರ್ವ ಪಕ್ಷೇತರ ಸದಸ್ಯನಿದ್ದಾನೆ. ಒಂದೆಡೆ ಅಧ್ಯಕ್ಷ ಕಮಲದ ಬೆನ್ನು ಬಿದ್ದಿದ್ದರೆ, ವಿಚಿತ್ರವೆಂಬಂತೆ ಕಮಲದ ನಾಲ್ಕು ಸದಸ್ಯರೇ ಅಧ್ಯಕ್ಷರ ವಿರುದ್ಧದ ಅವಿಶ್ವಾಸದ ಅರ್ಜಿಗೆ ಸಹಿ ಮಾಡಿದ್ದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next