Advertisement

ಬಾಕಿ ವೇತನ ಪಾವತಿಗೆ ಆಗ್ರಹ

05:23 PM Nov 18, 2018 | Team Udayavani |

ಬಳ್ಳಾರಿ: ಆಶಾ ಕಾರ್ಯಕರ್ತೆಯರ ಬಾಕಿ ವೇತನ, ಕೇಂದ್ರದ ಪ್ರೋತ್ಸಾಹಧನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸಂಯುಕ್ತ (ಎಐಯುಟಿಯುಸಿ ಸಂಯೋಜಿತ) ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಗಾಂಧಿ ಭವನದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಆಶಾ ಕಾರ್ಯಕರ್ತೆಯರು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆವರಣದಲ್ಲಿ ಕೆಲಹೊತ್ತು ಧರಣಿ ನಡೆಸಿದರು. ನಂತರ
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಆರೋಗ್ಯ ಇಲಾಖೆಯಡಿ ಗ್ರಾಮೀಣ ಸೇರಿದಂತೆ ನಗರ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಸರಕಾರದ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಸರ್ಕಾರ 3500 ರೂ. ಗೌರವಧನ ನೀಡುತ್ತಿದ್ದು, ಕೇಂದ್ರ ಸರ್ಕಾರ ಕೆಲಸಕ್ಕೆ ತಕ್ಕಷ್ಟು ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಖಜಾನೆ-2ರಲ್ಲಿ ಬಾಕಿಯಿದ್ದ 6 ತಿಂಗಳ ವೇತನದಲ್ಲಿ ಈಚೆಗೆ ನಾಲ್ಕು ತಿಂಗಳ ವೇತನ ಪಾವತಿಯಾಗಿದೆ. ಇನ್ನುಳಿದ ಎರಡು ತಿಂಗಳ ವೇತನ ಬಾಕಿ ಉಳಿದಿದೆ. ಇನ್ನು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ದುಡಿದಷ್ಟು ಕೈಗೆ ಸಿಗುತ್ತಿಲ್ಲ. ಆರ್‌ಸಿಎಚ್‌ ಹೊಸ ಪೋರ್ಟಲ್‌ ಜಾರಿಯಾಗಿದ್ದರಿಂದ ಕಳೆದ ಮೂರು ತಿಂಗಳಿಂದ ಆಶಾ ಸೇವೆಗಳು ಎಂಸಿಟಿಎಸ್‌ನಲ್ಲಿ ಸರಿಯಾಗಿ ದಾಖಲಾಗಿಲ್ಲ. ಒಂದೇ ಸಮನೆ ಮೂರ್‍ನಾಲ್ಕು ತಿಂಗಳುಗಳ ಸೇವೆಗಳನ್ನು ದಾಖಲು ಮಾಡುವುದರಿಂದ ಕೆಲವೊಂದು ಸಮಸ್ಯೆಯಾಗುತ್ತಿದ್ದು, ಇದರಿಂದ ಆಶಾ ಕಾರ್ಯಕರ್ತೆಯರಿಗೆ ದುಡಿದಷ್ಟು ಪ್ರೋತ್ಸಾಹಧನ ಕೈಗೆ ಸೇರುತ್ತಿಲ್ಲ. ಇಂಥ ಸಮಸ್ಯೆಗಳ ನಿವಾರಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು
ಪ್ರತಿಭಟನಾಕಾರರು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ರಾಜ್ಯದ ನಿಗದಿತ ವೇತನ, ಕೇಂದ್ರದ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದೊಳಗಾಗಿ ಖಾತೆಗೆ ಪಾವತಿಯಾಗಬೇಕು. ಆಶಾ ಸಾಫ್ಟ್‌ (ಆಶಾನಿಧಿ) ಅಥವಾ ಆರ್‌ಸಿಎಚ್‌ ಪೋರ್ಟಲ್‌ ನೋಂದಣಿಗೆ ಆಶಾ ವೇತನ ಲಿಂಕ್‌ ಮಾಡಿರುವುದನ್ನು ಕೈ ಬಿಡಬೇಕು. ಆಶಾ ಕಾರ್ಯಕರ್ತೆಯರು ನಿರ್ವಹಿಸಿದ್ದ ಎಲ್ಲ ಕೆಲಸಗಳಿಗೂ ಸಂಪೂರ್ಣ ಪ್ರೋತ್ಸಾಹಧನ
ನೀಡಬೇಕು. ಪ್ರೋತ್ಸಾಹಧನವಿಲ್ಲದ ಲಾರ್ವಾ, ಕುಷ್ಟರೋಗ, ಐಯೋಡಿನ್‌ ಸೇರಿದಂತೆ ವಿವಿಧ ಸರ್ವೇಗಳಿಗೆ ದಿನಕ್ಕೆ 200 ರೂ. ಪ್ರೋತ್ಸಾಹಧನ ನಿಗದಿಪಡಿಸಬೇಕು. ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಮಿತಿ ರಚಿಸಿ, ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ತಾಲೂಕು ಆರೋಗ್ಯ
ಕೇಂದ್ರಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ವಿಶ್ರಾಂತಿ ಕೊಠಡಿಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಸಂಘದ ಡಿ.ನಾಗಲಕ್ಷ್ಮೀ, ಎ.ಶಾಂತಾ, ಜಿಲ್ಲಾಧ್ಯಕ್ಷೆ ವೀರಮ್ಮ, ಜಿಲ್ಲಾ ಕಾರ್ಯದರ್ಶಿ ಗೀತಮ್ಮ, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಸೇಖರ್‌, ಎಸ್‌ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಾ ಉಪಾಧ್ಯ, ಮಂಜುಳಾ, ಎ.ದೇವದಾಸ್‌, ಗೌರಮ್ಮ, ಲಕ್ಷೀ¾ದೇವಿ,
ಚನ್ನಮ್ಮ, ಶಶಿಕಲಾ, ಮಂಗಳಾ, ನೇತ್ರಾವತಿ, ಭುವನೇಶ್ವರಿ, ಅನಂತಲಕ್ಷ್ಮೀ, ಯಲ್ಲಮ್ಮ, ಜಲಜಾಕ್ಷ್ಮೀ, ಬಸಮ್ಮ, ರಾಜೇಶ್ವರಿ, ಅಂಬಿಕಾ, ಕಮಲ, ಜ್ಯೋತಿ, ಸುರೇಶ್‌, ಈಶ್ವರಿ ಸೇರಿದಂತೆ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next