ಬೆಂಗಳೂರು: ತನ್ನ ಕೆಲವು ತುರ್ತು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟವು ಬಿಬಿಎಂಪಿಯನ್ನು ಕೋರಿದೆ. ಒಕ್ಕೂಟದ ಕಟ್ಟಡದಲ್ಲಿ ಭಾನುವಾರ ನಡೆದ ರಾಜಕೀಯ ಹಾಗೂ ಚಿತ್ರರಂಗದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಎಂ.ಕೃಷ್ಣಮೂರ್ತಿ, ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮೇಯರ್ ಸಂಪತ್‌ರಾಜ್‌ರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರು ಗೈರಾಗಿದ್ದರು.
ಕಾರ್ಮಿಕರ ಒಕ್ಕೂಟದ ಕಚೇರಿ ಕಳೆದ ಹಲವು ವರ್ಷಗಳಿಂದ ಗಾಂಧಿನಗರದಲ್ಲಿನ ಬಿಬಿಎಂಪಿಗೆ ಸೇರಿದ ಜಾಗದಲ್ಲಿದೆ. ಹಾಗಾಗಿ, ಮುಂದಿನ 30 ವರ್ಷಗಳವರೆಗೆ ಕನಿಷ್ಠ ಮೊತ್ತಕ್ಕೆ ಈ ಜಾಗವನ್ನು ಒಕ್ಕೂಟಕ್ಕೆ ಭೋಗ್ಯಕ್ಕೆ ನೀಡಬೇಕು ಹಾಗೂ ಕಾರ್ಮಿಕರು ಮೃತಪಟ್ಟಾಗ ಅಥವಾ ನಿವೃತ್ತರಾದಾಗ ಅವರ ನಿರವಿಗಾಗಿ ಕಲ್ಯಾಣ ನಿಧಿಗೆ ಬಿಬಿಎಂಪಿ ಐದು ಕೋಟಿ ರೂ. ನೀಡಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು.
ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಂ.ಕೃಷ್ಣಮೂರ್ತಿ, “ಕಾರ್ಮಿಕರು ಹಲವು ವರ್ಷಗಳಿಂದ ಚಿತ್ರರಂಗಕ್ಕಾಗಿ ದುಡಿಯುತ್ತಿದ್ದೇವೆ. ನಮಗೆ ಸ್ವಂತ ಮನೆಯಿಲ್ಲ. ಒಕ್ಕೂಟದ ಕಚೇರಿಗೂ ಸ್ವಂತ ಜಾಗವಿಲ್ಲ. ಈಗಿರುವ ಜಾಗ ಬಿಬಿಎಂಪಿಗೆ ಸೇರಿದೆ. ಭೋಗ್ಯದ ಅವಧಿ ಮುಗಿಯುತ್ತಾ ಬಂದಿದ್ದು, ಹೆಚ್ಚಿನ ಹಣ ನೀಡುವ ಶಕ್ತಿ ಒಕ್ಕೂಟಕ್ಕಿಲ್ಲ. ಕಾರಣ, ಮುಂದಿನ 30 ವರ್ಷಗಳವರೆಗೆ ಕಡಿಮೆ ಮೊತ್ತಕ್ಕೆ ಈ ಜಾಗವನ್ನು ಒಕ್ಕೂಟಕ್ಕೆ ಭೋಗ್ಯಕ್ಕೆ ನೀಡಬೇಕು,’ ಎಂದರು.
ಸಮಂಜಸ ಬೇಡಿಕೆ: ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ದಿನೇಶ್ ಗುಂಡೂರಾವ್, “ಒಕ್ಕೂಟದ ಬೇಡಿಕೆ ಸಮಂಜಸವಾಗಿದೆ. ಮೇಯರ್ ಸಮಾರಂಭದಲ್ಲಿ ಭಾಗಿಯಾಗಿದ್ದರೆ ಅವರೇದುರೇ ಸಮಸ್ಯೆ ಪರಿಹಾರವಾಗುತ್ತಿತ್ತು. ಆದರೆ, ಅವರು ಮುಖ್ಯಮಂತ್ರಿಗಳ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೂ ನಮ್ಮ ಮನವಿಯನ್ನು ಅವರು ತಿರಸ್ಕರಿಸುವುದಿಲ್ಲ ಎಂಬ ವಿಶ್ವಾಸವಿದೆ. ಭೋಗ್ಯಕ್ಕೆ ಸಂಬಂಧಿಸಿದ ಒಕ್ಕೂಟದ ಬೇಡಿಕೆಯನ್ನು ಖಂಡಿತ ಮಾಡಿಸಿಕೊಡುತ್ತೇನೆ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ ಎಂಬ ನಂಬಿಕೆ ಇದೆ.
ಐದು ಕೋಟಿ ಅನುದಾನದ ವಿಚಾರವಾಗಿಯೂ ಚರ್ಚಿಸುತ್ತೇನೆ’ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಸೂರಪ್ಪ ಬಾಬು, ಹಿರಿಯ ನಟ ದೊಡ್ಡಣ್ಣ ಹಾಗೂ ಇತರರು ಭಾಗವಹಿಸಿದ್ದರು. ಇದೇ ವೇಳೆ ಅತಿಥಿಗಳನ್ನು ಸನ್ಮಾನಿಸಲಾಯಿತು.
ಮೇಯರ್ ನಿಧಿಯಲ್ಲಿ 5 ಕೋಟಿ ಕೊಡಿ: “ಐದು ಕೋಟಿ ನೀಡುವುದು ಬಿಬಿಎಂಪಿಗೇನು ದೊಡ್ಡ ವಿಚಾರವಲ್ಲ. ಮೇಯರ್ ನಿಧಿಯಲ್ಲಿ 150 ಕೋಟಿ ರೂ. ಇದೆ. ಅದರಲ್ಲಿ ಐದು ಕೋಟಿ ಕೊಡೋಕೆ ಹೇಳಿ’ ಎಂದು ತಮ್ಮದೇ ಧಾಟಿಯಲ್ಲಿ ದಿನೇಶ್ ಗುಂಡೂರಾವ್ ಅವರತ್ತ ನೋಡುತ್ತಾ ಹೇಳಿದ ಅಂಬರೀಷ್, ವಸತಿ ಯೋಜನೆಯಡಿ ಕಾರ್ಮಿಕರಿಗೆ ಮನೆ ನೀಡುವ ಬಗ್ಗೆಯೂ ಮುತುವರ್ಜಿ ವಹಿಸುವಂತೆ ಕೋರಿದರು. ಹಾಗೇ “ಹಲವು ವರ್ಷಗಳಿಂದ ಕಾರ್ಮಿಕರನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದೇನೆ. ಕಾರ್ಮಿಕರು ಮೊದಲು ಸ್ವಂತ ಮನೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸರ್ಕಾರದ ವಸತಿ ಯೋಜನೆ ಬಳಸಿಕೊಂಡು ಮನೆ ಮಾಡಿಕೊಳ್ಳಿ,’ ಎಂದು ಸಲಹೆ ನೀಡಿದರು.