ಬೆಂಗಳೂರು: ಒಂದನೇ ತರಗತಿಗೆ ಸೇರಲು ಐದು ವರ್ಷ ಹತ್ತು ತಿಂಗಳು ಪೂರ್ಣಗೊಳ್ಳುವುದು ಕಡ್ಡಾಯ ಎಂಬ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದುಗೊಳಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ್, ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣ ಸ್ವಾಮಿ ಅವರನ್ನೊಳಗೊಂಡ ನಿಯೋಗ ಮಂಗಳವಾರ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ, 5 ವರ್ಷ 10 ತಿಂಗಳ ಪೂರೈಸಿದ ಮಕ್ಕಳಿಗೆ ಮಾತ್ರ ಪ್ರವೇಶ ನೀಡಬೇಕು ಎಂಬ ನಿಯಮವನ್ನು ಸಡಿಲ ಮಾಡಬೇಕು. 2016-17ನೇ ಸಾಲಿನಲ್ಲಿ 5 ವರ್ಷ ತುಂಬಿದ ಮಕ್ಕಳನ್ನು ದಾಖಲೆ ಮಾಡಿಕೊಂಡಿರುವಂತೆ ಈ ವರ್ಷವೂ ಅವಕಾಶ ನೀಡಬೇಕು ಎಂದು ಕೋರಿಕೊಂಡರು.
ಮಕ್ಕಳಿಗೆ ಅನ್ಯಾಯ: 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮ ತಂದಿರುವುದರಿಂದ ಮಕ್ಕಳ ವಯೋಮಿತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ, ಶಾಲಾ ಮುಖ್ಯಶಿಕ್ಷಕರು ಮಕ್ಕಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಪೂರ್ವಪ್ರಾಥಮಿಕ ವ್ಯವಸ್ಥೆ ಇಲ್ಲ. ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ವ್ಯವಸ್ಥೆ ಇರುವುದರಿಂದ ಪಾಲಕರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ.
ಆಗ 5 ವರ್ಷ 10 ತಿಂಗಳು ತುಂಬಿದ ಮಗು 1ನೇ ತರಗತಿಯನ್ನು ಅದೇ ಶಾಲೆಯಲ್ಲಿ ಅಥವಾ ಬೇರೆ ಯಾವುದಾದರು ಶಾಲೆಯಲ್ಲಿ ಮುಂದುವರಿಸುತ್ತದೆ. ಅಂಗನವಾಡಿಗೆ ಹೋಗುವ ಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಪಾಲಕ, ಪೋಷಕರ ಸ್ವಯಂ ಒಪ್ಪಿಗೆ ಮೇರಿಗೆ 5 ವರ್ಷ ಪೂರೈಸಿದ ಮಗುವಿಗೆ ಪ್ರವೇಶಾತಿ ನೀಡಬೇಕು ಹಾಗೂ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ, ಯುಕೆಜಿ) ತೆರೆಯಬೇಕು.
ಇಲ್ಲದಿದ್ದರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕೂಡ ಗಣನೀಯವಾಗಿ ಕುಸಿಯಲಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ತನ್ವೀರ್ ಸೇಠ್, ಒಂದನೇ ತರಗತಿಗೆ ನಿಗದಿ ಮಾಡಿರುವ ಮಕ್ಕಳ ವಯೋಮಿತಿಯಲ್ಲಿ ಸಡಿಲಿಕೆ ಮಾಡುವ ಸಂಬಂಧ ಪರಿಶೀಲಿಸಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ ಎಂಬ ಭವರವಸೆ ನೀಡಿದರು.