ಆಳಂದ: ಸರಸಂಬಾ ವಲಯದ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಸರಸಂಬಾ ಜೆಸ್ಕಾಂ ಕಚೇರಿ ಎದುರು ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ರೈತರು, ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇದೆ ವೇಳೆ ಮಹಾಂತಪ್ಪ ಆಲೂರೆ ಮಾತನಾಡಿ, ಪ್ರತಿದಿನ ಏಳೆಂಟು ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಸರ್ಕಾರದ ಆದೇಶವಿದೆ. ಈ ಹಿಂದೆ ವಾರದ ಶಿಫ್ಟ್ ಆಧಾರದಲ್ಲಿ ಏಳು ಗಂಟೆ ವಿದ್ಯುತ್ ನೀಡಿ, ಈಗ ಏಳು ಗಂಟೆಯಲ್ಲೇ ಮೂರು ಶಿಫ್ಟ್ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದುರು.
ಹಿಂಗಾರು ಬೆಳೆ ಬಿತ್ತನೆ ಮಾಡಿ, ಬೆಳೆಗಳಿಗೆ ಒಂದೆರಡು ಬಾರಿ ನೀರುಣಿಸಲು ಮುಂದಾದರೆ ವಿದ್ಯುತ್ ಇಲ್ಲದೆ ಪರದಾಡುವಂತೆ ಆಗಿದೆ. ಇದಕ್ಕೆ ಜೆಸ್ಕಾಂ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಹೊತ್ತಲ್ಲಿ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಉದ್ಯಮಕ್ಕೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಮಾನವೀಯತೆಯಿಂದ ರೈತರಿಗೆ ಬೆಳಗಿನ 6ರಿಂದ ಮಧ್ಯಾಹ್ನ 12ಗಂಟೆ ವರೆಗೆ ತ್ರಿಫೇಸ್, ಮಧ್ಯಾಹ್ನ 12ರಿಂದ ಸಂಜೆ 7ಗಂಟೆ ವರೆಗೆ ತ್ರಿಫೇಸ್ ವಿದ್ಯುತ್ ನೀಡಬೇಕು. ರಾತ್ರಿ 7ಗಂಟೆಯಿಂದ ಬೆಳಗ್ಗೆ 6ಗಂಟೆ ವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಬೇಡಿಕೆಗಳ ಕುರಿತು ಸರ್ಕಾರ ಮತ್ತು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ರೈತ ರಾಜೇಂದ್ರ ಖಾನಾಪುರೆ, ಸೂರ್ಯಕಾಂತ ಪೊಲೀಸ್ ಪಾಟೀಲ, ನಾಗೇಂದ್ರ ಮುಗಳೆ, ಬಸವರಾಜ ಖೇಡ, ಪಂಡೀತರಾವ ಜಿಡಗೆ, ಶಿವಕಿರಣ ಪಾಟೀಲ, ಮುಬಾರಕ್ ಮುಲಗೆ, ವಿಶ್ವನಾಥ ಜಮಾದಾರ ಹಾಗೂ ಸಾವಳೇಶ್ವರ, ಚಿಂಚೋಳಿ ಕೆ., ಚಿಂಚೋಳಿ ಬಿ., ಪಡಸಾವಳಿ, ನಾಗಲೇಗಾಂವ, ಸಕ್ಕರಗಾ, ಹಿರೋಳ್ಳಿ, ಅಂಬೇವಾಡ ಗ್ರಾಮದ ರೈತರು ಭಾಗವಹಿಸಿದ್ದರು. ಪಿಎಸ್‌ಐ ಮಲ್ಲಣ್ಣಾ ಯಲ್ಲಗೊಂಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.