Advertisement

ಮರಳು ನೀತಿ ಶರತ್ತು ಸಡಿಲಿಕೆಗೆ ಕೋರಿಕೆ: ಸಚಿವ ಖಾದರ್‌

12:21 PM Sep 18, 2018 | Team Udayavani |

ಮಂಗಳೂರು: ಕರಾವಳಿಗೆ ರೂಪಿಸಿರುವ ಪ್ರತ್ಯೇಕ ಮರಳು ನೀತಿಯಲ್ಲಿರುವ ಕೆಲವು ಶರತ್ತುಗಳಿಂದ ಮರಳುಗಾರಿಕೆಗೆ ಸಮಸ್ಯೆಯಾಗಿದ್ದು, ಇವುಗಳನ್ನು ಸಡಿಲಗೊಳಿಸಲು ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇರುವ ಪ್ರತ್ಯೇಕ ಮರಳು ನೀತಿಯಲ್ಲಿ ಮರಳು ಗುತ್ತಿಗೆ ವಹಿಸುವವರು ಅದೇ ತಾಲೂಕಿನವರಾಗಿರಬೇಕು, 5 ವರ್ಷಗಳ ಅನುಭವ ಹೊಂದಿರಬೇಕು ಮುಂತಾದ ಶರತ್ತುಗಳಿವೆ. ಇದರಿಂದಾಗಿ ಮರಳು ಬ್ಲಾಕ್‌ಗಳ ಗುರುತಿಸಿದರೂ ಗುತ್ತಿಗೆ ವಹಿಸಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಇದರಿಂದ ಮರಳು ಸಿಗುವುದಕ್ಕೆ ಸಮಸ್ಯೆಯಾಗಿದೆ.

ಆದುದರಿಂದ ಕೆಲವು ಶರತ್ತುಗಳನ್ನು ಸಡಿಲಗೊಳಿಸಬೇಕು ಎಂಬುದಾಗಿ ಸರಕಾರಕ್ಕೆ ಕೋರಿಕೆ ಸಲ್ಲಿಸಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ಶೀಘ್ರ ಅವರ ಜತೆ ಚರ್ಚೆ ಸಭೆ ನಡೆಸಿ ಕೋರಿಕೆಯನ್ನು ಸರಕಾರಕ್ಕೆ ನೀಡಲಾಗುವುದು ಎಂದರು.

ಜನರ ಆವಶ್ಯಕತೆಗಳಿಗೆ ಮರಳು 3,000ರಿಂದ 4,000 ರೂ. ಒಳಗೆ ಸಿಗುವಂತಾಗಬೇಕು. ಆದರೆ ಪ್ರಸ್ತುತ ಮರಳು ಸಿಗದಂತಹ ಪರಿಸ್ಥಿತಿ ಇದೆ. 4,000 ರೂ.ಗೆ ಸಿಗದ ಮರಳು 15,000 ರೂ. ನೀಡಿದರೆ ಸಿಗುತ್ತದೆ ಎಂಬುದಾಗಿ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ಆದುದರಿಂದ ಜಿಲ್ಲಾಧಿಕಾರಿಯವರು ಕೂಡಲೇ ಈ ಬಗ್ಗೆ ಗಮನ ಹರಿಸಿ ಜನರಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಸಿಆರ್‌ಝಡ್‌ ಪ್ರದೇಶದಲ್ಲೂ ಮರಳುಗಾರಿಕೆ ಶೀಘ್ರ ಆರಂಭಗೊಳ್ಳುವ ನಿಟ್ಟಿನಲ್ಲೂ ಗಮನ ಹರಿಸಬೇಕು. ಅಂತರ್‌ಜಿಲ್ಲಾ ಸಾಗಾಟ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಮರಳು ಸಮಸ್ಯೆ ತಲೆದೋರದಂತೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.

ತುಂಬೆ ವೆಂಟೆಡ್‌ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದೆ ಎಂದು ಮಾಹಿತಿ ಇದೆ. ಇದನ್ನು ತೆಗೆದು ಸರಕಾರಿ ಕಾಮಗಾರಿಗಳಿಗೆ ಪೂರೈಸಬಹುದಾಗಿದೆ. ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಮರಳುಗಾರಿಕೆ ಕ್ಷೇತ್ರದಲ್ಲಿ ಅಕ್ರಮಗಳು ನಡೆದಾಗ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಕೆಲವರದು ಪ್ರಥಮ ಪ್ರಕರಣ. ಇವುಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆಯುವುದು ಅಗತ್ಯ ಎಂಬುದು ತನ್ನ ವೈಯುಕ್ತಿಕ ಅಭಿಪ್ರಾಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next