ಹುಮನಾಬಾದ: ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗ ವರದಿ ಜಾರಿಗೊಳ್ಳಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಸಂಘಟನೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವ ಮಧ್ಯದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅಡ್ಡಿಪಡಿಸುತ್ತಿರುವುದು ಖಂಡನೀಯವಾಗಿದೆ ಎಂದು ದಲಿತ ಮಾದಿಗ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಕಾಳಮದ್ರಗಿ ಹೇಳಿದರು.
ದಲಿತ ಮಾದಿಗ ಸಮನ್ವಯ ಸಮಿತಿ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಹಾಗೂ ಮಾದಿಗ ಸಮುದಾಯದ ವಿರುದ್ಧ ಹೇಳಿಕೆ ನೀಡುತ್ತಿರುವ ಸಚಿವ ಪ್ರಭು ಚವ್ಹಾಣ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳಿಂದ ಸಮುದಾಯಕ್ಕೆ ನ್ಯಾಯ ನೀಡುವಂತೆ ನಿರಂತ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಗಳು ಕೂಡ ಸದಾಶಿವ ಆಯೋಗ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡುತ್ತಿದ್ದಾರೆ. ಇದೀಗ ನಡೆಯುತ್ತಿರುವ ಸದನದಲ್ಲಿ ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಸಚಿವ ಸಂಪುಟದಲ್ಲಿ ಒಟ್ಟಿಗೆ ಪಡೆದು ವರದಿಯನ್ನು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಜಯರಾಜ ವೈದ್ಯ, ಪಪ್ಪುರಾಜ ಚತುರೆ, ಕಮಲ ಹೆಗಡೆ ಸೇರಿದಂತೆ ಅನೇಕರು ಮಾತನಾಡಿ, ಮಾದಿಗ ಸಮುದಾಯಕ್ಕೆ ಸರ್ಕಾರಗಳು ನ್ಯಾಯ ಒದಗಿಸುವ ಪ್ರಾಮಾಣಿಕ ಕಾರ್ಯ ಮಾಡಬೇಕು. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಗಳು ಈಡೇರಿಸುವ ಕೆಲಸ ಮಾಡಬೇಕು. ನಮ್ಮ ಹೋರಾಟಕ್ಕೆ ನ್ಯಾಯ ಸಿಗುವರೆಗೆ ಹೋರಾಟ ನಡೆಸುತ್ತೇವೆ. ಸಚಿವ ಪ್ರಭು ಚವ್ಹಾಣ ಮಾದಿಗ ಸಮುದಾಯದಕ್ಕೆ ನ್ಯಾಯ ಸಿಗದಂತೆ ಮಾಡುತ್ತಿದ್ದು, ಮುಂದಿನ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ಪಟ್ಟಣದ ಪ್ರವಸಿ ಮಂದಿರದಿಂದ ಅಂಬೇಡ್ಕರ್ ವೃತ್ತ ಮೂಲಕ ಪಂಡಿತ ಶಿವಚಂದ್ರ ನೆಲ್ಲಗಿ ವೃತ್ತದ ವರೆಗೆ ಪ್ರತಿಭಟನೆ ನಡೆಸಿದ ನಂತರ ಸಚಿವ ಪ್ರಭು ಚವ್ಹಾಣ ಅವರ ಪ್ರತಿಕೃತಿ ದಹನ ಮಾಡಿದರು. ಬಳಿಕ ತಹಸೀಲ್ ಕಚೇರಿಯವರೆಗೆ ಹಲಗೆ ಭಾರಿಸುವ ಮೂಲಕ ಪ್ರತಿಭಟಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಪ್ರಭುರಾವ ತಾಳಮಡಗಿ, ಅಶೋಕಕುಮಾರ ಕಟ್ಟಿ, ಪ್ರವಿನ ಹುಲ್ಲಾ, ರುಬೇನ್ ನಾಗನಾಯಕ, ಝರೇಪ್ಪಾ ಕಟ್ಟಿಮನಿ, ಶ್ರೀನಿವಾಸ ಮೂಲಿಮನಿ, ರೋಹನ ಚಟ್ನನಳ್ಳಿಕರ್, ಜೆ.ಕೆ ಕಿರಣ, ರವಿ ಮೂಗನೂರ, ಮನೋಜ ಮಿತ್ರಾ, ಪವನ ಸಾಗರ, ರಾಹುಲ್ ಜಕಾತೆ, ಮೋಹನ ತಾಳಮಡಗಿ, ಪ್ರೇಮಕುಮಾರ ವೈದ್ಯ, ಕೈಲಾಸ ಸೂರ್ಯವಂಶಿ, ನವಿನ ಕಟ್ಟಿ, ರಾಜು ವಳಖೆಂಡಿ, ಧನರಾಜ ಹಾದಿಮನಿ ಇದ್ದರು.