Advertisement

ಸ್ಲಂ ನಿವಾಸಿಗಳ ಮನೆ ನಿರ್ಮಾಣಕ್ಕೆ ಮನವಿ

10:38 AM Dec 14, 2021 | Team Udayavani |

ಕಲಬುರಗಿ: ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸುವ ಕೊಡುವ ನಿಟ್ಟಿನಲ್ಲಿ ನಗರ ವಸತಿ ಯೋಜನೆಯಡಿ ಸಬ್ಸಿಡಿಯನ್ನು ರಾಜ್ಯ ಸರ್ಕಾರ 6 ಲಕ್ಷ ರೂ.ಗೆ ಹೆಚ್ಚಿಸಬೇಕು ಮತ್ತು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಿ ಕನಿಷ್ಠ 4 ತಿಂಗಳಲ್ಲಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಸ್ಲಂ ಜನಾಂದೋಲನ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಸಂಘಟನೆಯ ಅಧ್ಯಕ್ಷೆ ಸುನಿತಾ ಕೊಲ್ಲೂರ, ಗೌರಮ್ಮ ಮಾಕಾ, ರೇಣುಕಾ ಸರಡಗಿ ಅವರು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮನವಿಸಲ್ಲಿಸಿ, ಕೊಳಚೆ ಪ್ರದೇಶದ ವಾಸಿಗಳು ವಾಣಿಜ್ಯ ಬ್ಯಾಂಕ್‌ಗಳಿಂದ ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಸರ್ಕಾರದಿಂದ ಬ್ಯಾಂಕ್‌ ಗಳಿಗೆ ಮಾರ್ಗಸೂಚಿ ಹೊರಡಿಸಬೇಕು. ಫಲಾನುಭವಿ ಶುಲ್ಕ ಪಾವತಿಸಲು ನಗರ ಸ್ಥಳೀಯ ಸಮಿತಿಗಳ ವಿಶೇಷ ನಿಧಿ ಉಪಯೋಗಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯ ವಸತಿ ಇಲಾಖೆ ಪ್ರಗತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ಸ್ಲಂ ನೀತಿ-2016ರ ಅನ್ವಯ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಇಬ್ಬರು ಸ್ಲಂ ಸಂಘಟನೆಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕು. ತ್ವರಿತವಾಗಿ ಹಕ್ಕುಪತ್ರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಲಂ ಮುಕ್ತ ನಗರಗಳ ಅಥವಾ ಸರ್ವರಿಗೂ ಸೂರು ಘೋಷಣೆ ಖಾತ್ರಿಗೊಳ್ಳಬೇಕಾದರೆ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗೊಳಿಸಬೇಕು. ಈಗಾಗಲೇ 2018ರಲ್ಲಿ ಕರ್ನಾಟಕ ಸ್ಲಂ ಅಭಿವೃದ್ಧಿ ಕಾಯ್ದೆ ಕರಡನ್ನು ರಾಜ್ಯ ಸರ್ಕಾರ ಸ್ವೀಕರಿಸಿದ್ದು, ಈ ಕರಡನ್ನು ಕಾಯ್ದೆಯಾಗಿ ಜಾರಿಗೊಳಿಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ವಸತಿ ಇಲಾಖೆ ಕೈಗೊಳ್ಳಲು ನಿರ್ದೇಶಿಸಬೇಕೆಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಅಘೋಷಿತ ಕೊಳಚೆ ಪ್ರದೇಶಗಳನ್ನು ನಿಗದಿತ ಕಾಲಮಿತಿಯೊಳಗೆ ಘೋಷಿಸಲು ಆದೇಶಿಸಬೇಕು. ಪ್ರಸ್ತುತ ರಾಜ್ಯದಲ್ಲಿ 2780 ಕೊಳಚೆ ಪ್ರದೇಶಗಳು ಘೋಷಣೆಯಾಗಿದ್ದು, ನಗರೀಕರಣದ ಈ ಸಂದರ್ಭದಲ್ಲಿ ನಗರ ಜನಸಂಖ್ಯೆ ಹೆಚ್ಚಾಗುತ್ತಿದ್ದು ಕೊಳಚೆ ಪ್ರದೇಶಗಳು ಸಹ ಹೆಚ್ಚುತ್ತಿವೆ. ಖಾಸಗಿ ಮಾಲೀಕತ್ವದಲ್ಲಿರುವ 709 ಕೊಳಚೆ ಪ್ರದೇಶಗಳು ಘೋಷಣೆಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಣ ನೀಡಬೇಕು ಹಾಗೂ ಗುರುತಿನ ಪತ್ರ ವಿತರಿಸಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next