Advertisement

ಪರೀಕ್ಷೆ ಅಕ್ರಮದ ಆರೋಪಿ ಬಂಧನಕ್ಕೆ ಆಗ್ರಹ

04:36 PM Apr 28, 2022 | Niyatha Bhat |

ಶಿವಮೊಗ್ಗ: ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾಹಾಗರಗಿ ಅವರನ್ನು ಬಂಧಿಸದೆ ಅಕ್ರಮ ಬಯಲಿಗೆಳೆದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್‌ ನೀಡಿದ ಸಿಐಡಿ ಅಧಿಕಾರಿಯನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿ ರಾಜ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮವಾಗಿ ದುಡ್ಡು ಮಾಡುವ ನೆಪದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗವನ್ನೇ ಬುಡಮೇಲು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಹಗಲು-ರಾತ್ರಿ ಕಷ್ಟಪಟ್ಟು ಓದಿದರೂ ಹಣದ ಆಸೆಗೆ ಎಲ್ಲ ವ್ಯರ್ಥವಾಗುತ್ತಿದೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸಚಿವರು ಶಾಸಕರು ಮತ್ತು ಬಿಜೆಪಿ ಮುಂಚೂಣಿ ಕಾರ್ಯಕರ್ತರಿಂದ ಸರ್ಕಾರಿ ಪ್ರಮುಖ ಹುದ್ದೆಗಳೆಲ್ಲ ಹಂಚಿಕೆಯಾಗುತ್ತಿವೆ ಎಂದು ದೂರಿದರು.

ಮುಂದಿನ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಈ ಕೂಡಲೇ ರಾಜ್ಯ ಸರ್ಕಾರ ದಿವ್ಯ ಹಾಗರಗಿ ಯನ್ನು ಬಂಧಿಸಬೇಕು ಹಾಗೂ ಆರೋಪಿ ಪತ್ತೆ ಹಚ್ಚಲು ಸಹಕರಿಸಿದ ಪ್ರಿಯಾಂಕ ಖರ್ಗೆಗೆ ವಿನಾಕಾರಣ ನೋಟಿಸ್‌ ನೀಡಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಮುಖಂಡರಾದ ರಾಘವೇಂದ್ರ, ಅರ್ಜುನ, ಶಿವಾನಂದ, ನಿಸಾರ್‌ ಅಹಮ್ಮದ್‌, ಜಾನ್‌, ಭರತ್‌, ಕಾಶಿ, ಜಮೀಲ್‌ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next