ಯಾದಗಿರಿ: ಗುರುಮಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕಡೇಚೂರು ಬಾಡಿಯಾಲ್ ಕೈಗಾರಿಕಾ ಪ್ರದೇಶದ ಕೈಗಾರಿಕಾ ಕಾರಿಡಾರ್ ಹೆಸರಿನಲ್ಲಿ 3200ಕ್ಕೂ ಹೆಚ್ಚು ಎಕರೆ ಫಲವತ್ತಾದ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ತಡೆಯುವಂತೆ ಕಾಂಗ್ರೆಸ್ ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಹಾಗೂ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಂಜುಳಾ ಗೂಳಿ ಅವರು ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ಈಗಾಗಲೇ ಒಂದು ಬಾರಿ ಕಳೆದ 2011ರಲ್ಲಿಯೇ 3200 ಎಕರೆ ರೈತರ ಫಲವತ್ತಾದ ಜಮೀನನ್ನು ವಶಪಡಿಸಿಕೊಂಡು ಕೇವಲ ಶೇ. 20ರಷ್ಟು ಮಾತ್ರ ಕೈಗಾರಿಕೆಗೆ ಬಳಸಿದ್ದಾರೆ. ಅದರಲ್ಲಿ ಯಾವುದೇ ಮಹತ್ವದ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಬಂದಿರುವ 3-4 ಸಣ್ಣಪುಟ್ಟ ಕೆಮಿಕಲ್ ಉತ್ಪಾದನೆ ಕಂಪನಿಗಳು ಮಾತ್ರ ಸ್ಥಪನೆಯಾಗಿದ್ದು, ಪರಿಸರಕ್ಕೆ ಹಾಗೂ ಜನರಿಗೆ ಮಾರಕವಾಗಿವೆ ಎಂದು ದೂರಿದರು.
ಅಲ್ಲದೇ ಭೂಮಿ ಕಳೆದುಕೊಂಡ ರೈತರಿಗೆ ಅತ್ತ ಭೂಮಿಯೂ ಉಳಿಯಲಿಲ್ಲ. ಇತ್ತ ಕೆಲಸವೂ ಸಿಗದೇ ಅತಂತ್ರರಾಗಿದ್ದಾರೆ ಎಂದು ಅವರು ವಿವರಿಸಿದರು. ತದನಂತರ 2012ರಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡವಳಿಕೆ ಆಗಿದ್ದು, ಇದರಲ್ಲಿ ಅನುಮೋದನೆಗೊಂಡ ಬೇಡಿಕೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಪುನಃ ಮತ್ತೆ ಈದೀಗ ಕೈಗಾರಿಕೆ ಕಾರಿಡಾರ್ ಹೆಸರಿನಲ್ಲಿ ಮತ್ತೆ 3200 ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದು ರೈತವಿರೋಧಿ ನೀತಿಯಾಗಿದ್ದು, ಈ ನಿಟ್ಟಿನಲ್ಲಿ ರೈತರು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿದ್ದಾರೆ. ಕಾರಣ ತಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರೈತರಿಗೆ ತೊಂದರೆಯಾಗುತ್ತಿರುವ ಇಂತಹ ನೀತಿಯನ್ನು ಕೈಬಿಡುವಂತೆ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಎಸ್.ಆರ್. ಪಾಟೀಲರು, ಸಿಎಂಗೆ ಪತ್ರ ಬರೆದು ಸದನದಲ್ಲಿಯೂ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ನಿಯೋಗದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.