ಬಳ್ಳಾರಿ: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ, ಫೆಲೋಶಿಪ್ ಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ನೇತೃತ್ವದಲ್ಲಿ ನೂರಾರು
ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ, ಫೆಲೋಶಿಪ್ ತಕ್ಷಣ ಬಿಡುಗಡೆಗೊಳಿಸುವಂತೆ ರಾಜ್ಯ ಸೇರಿದಂತೆ ದೇಶಾದ್ಯಂತ ಸಂಘಟನೆಯಿಂದ ಪ್ರತಿಭಟನೆ ನಡೆಸಿ, ರಾಜ್ಯ, ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆಯಾಗುವ ವಿಶ್ವಾಸವಿದ್ದು, ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ವಿದ್ಯಾರ್ಥಿ ವೇತನವನ್ನು 2003ರ ಬಳಿಕ ಪುನಃ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಕೂಡಲೇ ವಿದ್ಯಾರ್ಥಿ ವೇತನವನ್ನು 13 ಸಾವಿರ ರೂ.ಗೆ ಹೆಚ್ಚಿಸಬೇಕು. ರಾಜೀವ್ ಗಾಂಧಿ ಫೆಲೋಶಿಪ್, ಎಸ್‌ಸಿ-ಎಸ್‌ಟಿ, ಒಬಿಸಿ ರಾಷ್ಟ್ರೀಯ ಫೆಲೋಶಿಪ್, ಪ್ರೀ ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ವೇತನವನ್ನು 15 ದಿನಗಳೊಳಗಾಗಿ ಬಿಡುಗಡೆಗೊಳಿಸಬೇಕು. ಸಂಶೋಧನೆಯಲ್ಲಿ ಎಸ್‌ಸಿ- ಎಸ್‌ಟಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದುಳಿದ ವರ್ಗದಲ್ಲಿ ಕೇವಲ 300 ವಿದ್ಯಾರ್ಥಿಗಳು ರಾಷ್ಟ್ರೀಯ ಫೆಲೋಶಿಪ್ ಪಡೆಯುತ್ತಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಬೇಕು.
ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿದ್ಯಾರ್ಥಿ ವೇತನ, ಫೆಲೋಶಿಪ್ ನಿಗದಿತ ಅವಧಿಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದಾಗಿ ವಸತಿ ನಿಲಯ ಸಬಲಗೊಳಿಸಬೇಕು. ಗ್ರಂಥಾಲಯ, ಕ್ರೀಡೋಪಕರಣಗಳು, ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ಅಭಿವೃದ್ಧಿ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೀಕಾಂತ್‌ರೆಡ್ಡಿ, ಮುಖಂಡರಾದ ಸಂತೋಷ್‌ರಾವ್, ಹೇಮರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.