ಕಲಬುರಗಿ: ಹಿಂದಿನ 2014-15 ಹಾಗೂ 2015-16 ಜತೆಗೆ 2016-17ನೇ ಸಾಲಿನ ಕಬ್ಬಿನ ಹಣ ಪೂರ್ತಿ ಪಾವತಿಸದೆ ಇರುವುದಕ್ಕೆ ಹಾಗೂ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಗರಕ್ಕಾಗಮಿಸಿದ್ದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಸಕ್ಕರೆ ಕಾರ್ಖಾನೆಯವರು ಹಿಂದಿನ 2014-15 ಹಾಗೂ 2015-16 ಜತೆಗೆ 2016-17ನೇ ಸಾಲಿನ ಕಬ್ಬಿನ ಹಣ ಪೂರ್ತಿ ಪಾವತಿಸದೆ ಇರುವುದದಲ್ಲದೇ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಎರಡರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಯನ್ನು 30 ವರ್ಷ ಲೀಜ್ ಪಡೆದಿರುವ ಎನ್‌ಎಸ್‌ಎಲ್ ಕಂಪನಿಯವರು ಕಾರ್ಖಾನೆ ಹಾಗೂ ರೈತರ ಜಮೀನ ಮೇಲೆ 250 ಕೋಟಿ ರೂ.ಗೂ ಅಧಿಕ ಸಾಲದ ಪಡೆದ ವ್ಯವಹಾರದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ದೂರಿದರು.
ಕಬ್ಬಿನ ಬಾಕಿ ಹಣ ಕೇಳಿದ ರೈತ ಮುಖಂಡ ಧರ್ಮರಾಜ ಸಾಹು ವಿರುದ್ಧ ಎನ್‌ಎಸ್‌ಎಲ್ ಕಾರ್ಖಾನೆ ನೀಡಿದ ದೂರನ್ನು ಆಧರಿಸಿ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ಕೂಡಲೇ ಪ್ರಕರಣ ವಾಪಸ್ಸು ಪಡೆಯಬೇಕು ಎಂದರು.
ಆಳಂದ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ಮುಖಂಡರಾದ ನಾಗೇಂದ್ರರಾವ ದೇಶಮುಖ, ಶಾಂತವೀರಪ್ಪ ದಸ್ತಾಪುರ, ಕಲ್ಯಾಣಿ ಜಮಾದಾರ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಬೇಳೆ ವಿತರಿಸಿ: ಪಡಿತರ ವಿತರಣೆಯಲ್ಲಿ ತೊಗರಿ ಬೇಳೆ ವಿತರಿಸುವಂತಾಗಲು ಟೆಂಡರ್ ಆಗಿದ್ದರೂ ಪೂರೈಕೆ ಮಾಡದಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಇಎಂಡಿ ಹಣ ಮುಟ್ಟುಗೊಲು ಹಾಕಬೇಕೆಂದು ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಆನಂದ ಎಸ್. ಪಾಟೀಲ, ಎಂ.ಡಿ. ಸಾಜೀದ್ ಅಹ್ಮದ, ಮಲ್ಲು ಎಸ್. ಇಂದೂರ ಹಾಗೂ ಮುಂತಾದವರಿದ್ದರು.