Advertisement

ಪಕ್ಷ ವಿರೋಧಿಗಳ ವಿರುದ್ಧ  ಕ್ರಮಕ್ಕೆ ಮನವಿ

11:52 AM Apr 27, 2017 | Harsha Rao |

ಬೆಂಗಳೂರು: ಬಿಜೆಪಿಯ ಕೆಲವು ಮುಖಂಡರು ಗುರುವಾರ ಬೆಂಗಳೂರಿನಲ್ಲಿ ಕರೆದಿರುವ “ಸಂಘಟನೆ ಉಳಿಸಿ’ ಸಭೆ
ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ
ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಉಂಟಾಗಿದ್ದ ಗೊಂದಲಗಳ ಬಗ್ಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಧಾನ ಮಾಡಿ ಒಗ್ಗಟ್ಟು ಕಾಪಾಡಲು ಕೆಲವು ಸೂಚನೆಗಳನ್ನು ಕೊಟ್ಟಿದ್ದರು. ಅದರಂತೆ ಬೆಳಗಾವಿ ನಗರ, ಕೊಡಗು, ಬಳ್ಳಾರಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಈಶ್ವರಪ್ಪ ಅವರಿಗೆ ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ಕೊಟ್ಟಾಗಿದೆ. ನಾಲ್ವರ ವಿರುದ್ಧ ಕೈಗೊಂಡಿದ್ದ ಶಿಸ್ತು ಕ್ರಮ ಕೈಬಿಡಲಾಗಿದೆ. ಹೀಗಿರುವಾಗ ಬೇರೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡಿ ಗುರುವಾರ
ಸಭೆ ಕರೆದಿರುವುದು ದುರದೃಷ್ಟಕರ ಎಂದರು.

Advertisement

ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬುದು ತಪ್ಪು. ದೆಹಲಿಯಲ್ಲಿ ಅಮಿತ್‌ ಶಾ ನೀಡಿದ್ದ
ಸೂಚನೆಗಳನ್ನು ಅವರು ಪಾಲಿಸಿದ್ದಾರೆ. ಆದರೂ ಅವರು ಏಕಪಕ್ಷೀಯ ಧೋರಣೆ ಅನುಸರಿಸುತ್ತಿದ್ದಾರೆಂದು ಹೇಳಿ ಸಭೆ
ಕರೆದಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಅಧಿಕಾರ ನೀಡಬೇಕು ಎಂದು ಅಮಿತ್‌ ಶಾ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಯಡಿಯೂರಪ್ಪ ತಾಳ್ಮೆಯಿಂದ ಇದ್ದುಕೊಂಡು
ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಪಾಲಿಸಿದ್ದಾರೆ. ಆದರೂ ಅಸಮಾಧಾನಿತರು ಮಿತಿಮೀರಿ ವರ್ತಿಸುತ್ತಿರುವುದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಸಭೆ ನಡೆಸಿದರೆ ಈ ಕುರಿತು ಯಡಿಯೂರಪ್ಪ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.

ಈಶ್ವರಪ್ಪ ವಿರುದ್ಧವೂ ಗರಂ: ಈಶ್ವರಪ್ಪ ವಿರುದ್ಧವೂ ಕಿಡಿಕಾರಿದ ಪುಟ್ಟಸ್ವಾಮಿ, ಅಮಿತ್‌ ಶಾ ಅವರು ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ವಹಿಸಿದ ಬಳಿಕ ಮಾತನಾಡಿದ್ದ ಈಶ್ವರಪ್ಪ, ನಾನು ಹಿಂದುಳಿದ ವರ್ಗಗಳ ಮೋರ್ಚಾ ಸಭೆ ಮಾಡುತ್ತೇನೆ. ಬ್ರಿಗೇಡ್‌ಗೂ ನನಗೂ ಸಂಬಂಧವಿಲ್ಲ. ರಾಜಕೀಯೇತರ ಸಂಘಟನೆಯಾಗಿ ಅದು ಇರುತ್ತದೆ ಎಂದು ಹೇಳಿದ್ದರು. ಅಲ್ಲದೆ, ಅವರ ಉಸ್ತುವಾರಿಯಲ್ಲೇ ಎರಡು ಸಮಾವೇಶಗಳನ್ನೂ ನಡೆಸಲಾಯಿತು.
ಆದರೆ, ಈಗ ಪಕ್ಷದಿಂದಾಗಿ ಅವರಿಗೆ ಸಿಕ್ಕಿದ ಅಧಿಕಾರ ಬಳಸಿಕೊಂಡು ಪಕ್ಷ ಸಂಘಟನೆ ಬದಲು ಬ್ರಿಗೇಡ್‌ ಬಲವರ್ಧನೆ
ಮಾಡುತ್ತಿರುವುದು, ಅಸಮಾಧಾನಿತರು ಕರೆದಿರುವ ಸಭೆಗೆ ಹಾಜರಾಗುತ್ತಿರುವುದು ಸರಿಯಲ್ಲ. ಇದು ನೇರವಾಗಿ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈಶ್ವರಪ್ಪ ಪಕ್ಷದ ಅಧ್ಯಕ್ಷರಾಗಿದ್ದವರು. ಪದಾಧಿಕಾರಿಗಳ ನೇಮಕದಲ್ಲಿ ಎಲ್ಲಾ ಹಿರಿಯ ನಾಯಕರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬ ಅರಿವು ಅವರಿಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಅನಾವಶ್ಯಕ ಗೊಂದಲ ಉಂಟುಮಾಡುವುದು, ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ. ಹೀಗಾಗಿ ಅವರು ಬ್ರಿಗೇಡ್‌ ಗಟ್ಟಿ ಮಾಡಿಕೊಳ್ಳಬೇಕೇ ಅಥವಾ ಪ್ರತಿಪಕ್ಷ ನಾಯಕರಾಗಿ ಪಕ್ಷ ಗಟ್ಟಿಗೊಳಿಸಬೇಕೇ ಎಂಬುದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಈಶ್ವರಪ್ಪ ಅವರು ಸಭೆಯಲ್ಲಿ ಭಾಗವಹಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಾಧ್ಯಕ್ಷರಿಗೆ ಇಲ್ಲ. ಹೀಗಾಗಿ ಈ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಕೋರಲಾಗುವುದು ಎಂದು ಎಚ್ಚರಿಕೆ
ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next