ಹೊಸದಿಲ್ಲಿ : ದೇಶಾದ್ಯಂತ 68 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಗುತ್ತಿದೆ. ದೆಹಲಿಯ ರಾಜ್‌ಪಥ್‌ನಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡಿ ಪಥಸಂಚಲನದ ಗೌರವ ಸ್ವೀಕರಿಸಿದರು.
ದೆಹಲಿಯಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.ಈ ವೇಳೆ ಸೇನೆಯ ಮೂರು ದಳದ ಸೈನಿಕರು ಉಪಸ್ಥಿತರಿದ್ದರು. ಮುಖ್ಯ ಸಮಾರಂಭದಲ್ಲಿ ಹುತಾತ್ಮ ಯೋಧರಿಗೆ ಮರಣೋತ್ತರ ಪದಕಗಳನ್ನು ನೀಡಿ ಗೌರವಿಸಲಾಯಿತು.
ಅಬುದಾಬಿಯ ಯುವರಾಜ ಶೇಖ್ ಮಹಮದ್ ಬಿನ್ ಜಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಸಶಸ್ತ್ರ ಪಡೆಗಳ ಆಕರ್ಷಕ ಕವಾಯತು, ಹೆಲಿಕ್ಯಾಪ್ಟರ್‌ಗಳ ರೋಮಾಂಚನಕಾರಿ ಹಾರಾಟ, 15 ಸೇನಾ ಪಡೆಗಳ ಪಥಸಂಚಲನ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಪಡೆಗಳ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.
ಇದೇ ಮೊದಲ ಬಾರಿಗೆ ಎನ್‌ಎಸ್‌ಜಿ ಕಮಾಂಡೋ ಪಡೆ ಪಥ ಸಂಚಲನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯುಎಇ ಯೋಧರ ಪಡೆಯೂ ಪಥ ಸಂಚಲನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ಉಗ್ರ ದಾಳಿಯ ಕರಿ ಛಾಯೆ ಇದ್ದ ಕಾರಣ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.