ಹೊಸದಿಲ್ಲಿ: ಪ್ರತೀ ವರ್ಷ ಗಣ ರಾಜ್ಯೋತ್ಸವ ಸ್ತಬ್ಧಚಿತ್ರ ಆಯ್ಕೆ ವಿಚಾರದಲ್ಲಿ ವಿವಾದ ಗಳು ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ರಕ್ಷಣ ಸಚಿವಾಲಯವು ಹೊಸ ಪರಿಹಾರ ಸೂತ್ರವೊಂದನ್ನು ಪರಿಚಯಿಸಲು ಮುಂದಾಗಿದೆ. ಅದರಂತೆ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು 3 ವರ್ಷಗಳಿಗೆ ಒಮ್ಮೆ ತಮ್ಮ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುವ ಅವಕಾಶ ಪಡೆಯಲಿದೆ. ಕೇಂದ್ರ ಸರಕಾರದ ಈ ಪ್ರಸ್ತಾವನೆಗೆ ಕರ್ನಾಟಕ ಸಹಿತ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹಿ ಹಾಕಿವೆ.
ಇದು ಜಾರಿಯಾದರೆ ಎಲ್ಲರಿಗೂ ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದು ಅಧಿಕೃತ ಮೂಲ ಗಳು ತಿಳಿಸಿವೆ. ಕರ್ನಾಟಕ ಮತ್ತು ಪಂಜಾಬ್ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ ಇರುವುದು ವಿವಾದವಾಗಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.
ಪ್ರತೀ ವರ್ಷ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 15 ಟ್ಯಾಬ್ಲೋಗಳನ್ನು ಗಣರಾಜ್ಯೋತ್ಸವದ ಪಥಸಂಚಲನಕ್ಕೆಂದು ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಎಲ್ಲ ರಾಜ್ಯಗಳ ಸ್ತಬ್ಧ ಚಿತ್ರಗಳಿಗೆ ಪ್ರತೀ ವರ್ಷವೂ ಅವಕಾಶ ನೀಡಲು ಆಗುವುದಿಲ್ಲ. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರತೀ ರಾಜ್ಯಕ್ಕೂ 3 ವರ್ಷಗಳಿಗೊಮ್ಮೆ ಆವರ್ತನ ಪದ್ಧತಿಯಲ್ಲಿ ಟ್ಯಾಬ್ಲೋ ಪ್ರದರ್ಶಿಸಲು ಅವಕಾಶ ನೀಡುವ ಉಪಾಯವನ್ನು ಕೇಂದ್ರ ಸರಕಾರ ಮಾಡಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲೇ ರಕ್ಷಣ ಕಾರ್ಯದರ್ಶಿ ಗಿರಿಧರ್ ಅರಮನೆ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸ್ಥಾನಿಕ ಆಯುಕ್ತರು ಈ ಪ್ರಸ್ತಾವನೆ ಕುರಿತು ಚರ್ಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕರಡು ಒಪ್ಪಂದವನ್ನು ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಂದಿಡಲಾಗಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕಕ್ಕೆ 24 ವರ್ಷಗಳಲ್ಲಿ 20 ಬಾರಿ ಅವಕಾಶ
ಕರ್ನಾಟಕ ರಾಜ್ಯಕ್ಕೆ ಕಳೆದ 24 ವರ್ಷಗಳಲ್ಲಿ ದಿಲ್ಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಒಟ್ಟು 20 ಬಾರಿ ಅವಕಾಶ ದೊರೆತಿದೆ. ಈ ಪೈಕಿ 6 ಬಾರಿ ರಾಜ್ಯದ ಸ್ತಬ್ಧಚಿತ್ರಗಳು ಬಹುಮಾನ ಪಡೆದಿವೆ. 2002, 2004, 2007 ಮತ್ತು 2009ರಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ.