ನವದೆಹಲಿ: 71ನೇ ಗಣರಾಜ್ಯೋತ್ಸವ ದಿನಾಚರಣೆಯಂದು ಆರು ಮಂದಿ ಸೇನಾ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ ಭಾಜನರಾದವರ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಲಾಮಾ, ಮೇಜರ್ ಬಿಜೇಂದ್ರ ಸಿಂಗ್, ನಯಿಬ್ ಸುಬೇದಾರ್ ನರೇಂದ್ರ ಸಿಂಗ್, ಲೇಟ್ ನಯಿಬ್ ಸುಬೇದಾರ್ ನಾಯಕ್ ನರೇಶ್ ಕುಮಾ, ಕರ್ಮಾಡೆಯೋ ಸೇರಿದಂತೆ ಆರು ಯೋಧರು ಶೌರ್ಯ ಪ್ರಶಸ್ತಿ ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಬಾರಿ ಗಣರಾಜ್ಯೋತ್ಸವದಲ್ಲಿ ಹತ್ತು ಪರಮ್ ವಿಶಿಷ್ಟ ಸೇವಾ ಪದಕ, 32 ಅತಿ ವಿಶಿಷ್ಟ ಸೇವಾ ಪದಕ, 8 ಯುದಾ ಸೇವಾ ಪದಕ (ವೈಎಸ್ ಎಂ) ಸೇರಿದಂತೆ ಒಟ್ಟು 151 ಸೇನಾ ಪದಕಗಳನ್ನು ಕೇಂದ್ರ ಘೋಷಿಸಿದೆ.
ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಲಾಮಾ ಅವರು ಮಣಿಪುರದಲ್ಲಿ ಗುಪ್ತಚರ ಸಂಪರ್ಕದ ಮೂಲಕ ಹದಿನಾಲ್ಕು ಉಗ್ರರನ್ನು ಸೆರೆಹಿಡಿಯಲು ಅಭೂತಪೂರ್ವ ಯೋಜನೆ ರೂಪಿಸಿದ್ದಕ್ಕೆ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಜೇಂದ್ರ ಸಿಂಗ್ ಅವರಿಗೆ ಸಂಚನ್ನು ಬೇಧಿಸುವ ತಂತ್ರಗಾರಿಕೆ, ಕಾರ್ಯನಿರ್ವಹಣೆ ಹಾಗೂ ಧೈರ್ಯಕ್ಕಾಗಿ ಶೌರ್ಯ ಪ್ರಶಸ್ತಿ ನೀಡಲಾಗಿದೆ.
ಗಡಿ ನಿಯಂತ್ರಣ ರೇಖೆ ಸಮೀಪ ರಾತ್ರಿ ವೇಳೆಯೂ ಶ್ರಮ ವಹಿಸಿ ಶತ್ರುಪಡೆಗಳ ಚಲನವಲನ ಗ್ರಹಿಸಿ ದಾಳಿ ನಡೆಸಿದ್ದ ವೀರ ಸಾಹಸಕ್ಕೆ ನಯಿಬ್ ಸುಬೇದಾರ್ ನರೇಂದರ್ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ ನೀಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೂವರು ಕಟ್ಟಾ ಉಗ್ರರನ್ನು ಹೊಡೆದುರುಳಿಸುವ ಕಾರ್ಯಾಚರಣೆಯಲ್ಲಿ ಯೋಜನೆ ರೂಪಿಸಿ, ಕಾರ್ಯಗತಗೊಳಿಸಿ ಯಶಸ್ವಿಯಾದ ರಾಷ್ಟ್ರೀಯ ರೈಫಲ್ಸ್ ತಂಡದ ನಯಿಬ್ ಸುಬೇದಾರ್ ಸೋಂಬಿರ್ ಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಮತ್ತೊಬ್ಬ ವೀರ ಯೋಧ ನಾಯಕ್ ನರೇಶ್ ಕುಮಾರ್ ಜಮ್ಮು ಕಾಶ್ಮೀರದ ಗ್ರಾಮದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತೋರಿದ ಸಾಹಸಕ್ಕೆ ಶೌರ್ಯ ಪ್ರಶಸ್ತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.