Advertisement

ಜನಪ್ರತಿನಿಧಿಗಳು-ಮಠಾಧೀಶರ ಭಾಷಣಕ್ಕೆ  ತೆರಿಗೆ ಹಾಕಿ

03:20 PM Aug 23, 2017 | |

ಚಿತ್ರದುರ್ಗ: ಈಗ ಭಾಷಣದ ಭರಾಟೆ ಎಲ್ಲ ಕಡೆ ಹೆಚ್ಚಾಗಿದೆ. ಆದ್ದರಿಂದ ಭಾಷಣಗಳಿಗೆ ತೆರಿಗೆ ಹಾಕಿದರೆ ಸರ್ಕಾರದ ಆದಾಯ ಹೆಚ್ಚುತ್ತದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಹಾಗೂ ತರಳಬಾಳು ಕಲಾ ಸಂಘದ  ಆಶ್ರಯದಲ್ಲಿ ಮಂಗಳವಾರ ಸಂಜೆ ನಡೆದ ಜಾನಪದ ಸಿರಿ ಸಂಭ್ರಮ-2017 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಅತಿ ಹೆಚ್ಚು ಭಾಷಣ ಮಾಡುವವರು ಜನಪ್ರತಿನಿಧಿಗಳು ಮತ್ತು ಸ್ವಾಮೀಜಿಗಳು. ಅವರ ಭಾಷಣಕ್ಕೆ ರಿಯಾಯತಿ ನೀಡದೆ ತೆರಿಗೆ ವಿಧಿಸಬೇಕು ಎಂದು ಸಲಹೆ ನೀಡಿದರು.

ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲಾ ಪ್ರಕಾರಗಳನ್ನು, ಮೂಲ ಸಂಸ್ಕೃತಿ ಮತ್ತು  ಕಲಾವಿದರನ್ನು ಉಳಿಸುವ ಉದ್ದೇಶದಿಂದ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಮುಂದಾಳತ್ವದಲ್ಲಿ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶಾಲಾ ಮಕ್ಕಳ ಮೂಲಕ ರೂಪುಗೊಳಿಸಲಾಗಿದ್ದು ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಿದ್ದೇವೆ. ಯಾರೇ ಎಲ್ಲಿಗೆ ಆಹ್ವಾನ ನೀಡಿದರೂ ಇದೇ ತಂಡ ಅಲ್ಲಿಗೆ ಹೋಗಿ ಪ್ರದರ್ಶನ ನೀಡಲಿದೆ ಎಂದರು.

ಅಭಿಜಾತ ಜನಪದ ಕಲೆಗಳಾದ ಬೀಸು ಕಂಸಾಳೆ, ಪೂಜಾ ಕುಣಿತ, ಪಟ ಕುಣಿತ, ಕಂಗೀಲು ನೃತ್ಯ, ಉಮ್ಮತ್ತಾಟ, ಕರಗ ಕೋಲಾಟ, ಸೋಲಿಗರ ನೃತ್ಯ, ಮಲ್ಲಗಂಬ, ವೀರಗಾಸೆ, ಡೊಳ್ಳುಕುಣಿತ, ಸಮೂಹ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌, ಡಿಡಿಪಿಐ ರೇವಣಸಿದ್ದಪ್ಪ ಮತ್ತಿತರರು ಇದ್ದರು.

ಗಂಡುಮಕ್ಕಳು ಪ್ರದರ್ಶಿಸುವ ಮಲ್ಲಕಂಬ
ಹಬ್ಬದಾಟವನ್ನು ಹೆಣ್ಣುಮಕ್ಕಳು ಮಾಡಲಿದ್ದು, ಅದಕ್ಕೆ ನಾವು ಮಲ್ಲಿ ಕಂಬ ಹಬ್ಬ ಎಂಬ ಹೆಸರು ನೀಡಿದ್ದೇವೆ. ತರಳಬಾಳು ವಿದ್ಯಾಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ವಿಶೇಷ ಶಿಬಿರ ಏರ್ಪಡಿಸಿ ವಿವಿಧ ಕಲೆಗಳ ತಜ್ಞರಿಂದ ತರಬೇತಿ ನೀಡಲಾಗುತ್ತದೆ. ನಂತರ ಅವರಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 
ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next