Advertisement

ಜನಪ್ರತಿನಿಧಿಗಳ ಸೌಲಭ್ಯಗಳಿಗೆ ಮಿತಿಯಿರಲಿ

10:50 AM Mar 27, 2017 | Harsha Rao |

ಗಾಯಕ್‌ವಾಡ್‌ ಪ್ರಕರಣ ಪ್ರಜಾಪ್ರಭುತ್ವಕ್ಕೆ ಕಳಂಕ

Advertisement

ಗಾಯಕ್‌ವಾಡ್‌ ಪ್ರಕರಣ ಜನಪ್ರತಿನಿಧಿಗಳಿಗೆ ಇಷ್ಟೆಲ್ಲ ಸೌಲಭ್ಯ ನೀಡುವ ಅಗತ್ಯವಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ. ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬ ಏಕೈಕ ಕಾರಣಕ್ಕೆ ತೆರಿಗೆದಾರರ್ಯಾಕೆ ಐದು ವರ್ಷ ಅವರನ್ನು ಸಕಲ ಸವಲತ್ತುಗಳನ್ನು ಕೊಟ್ಟು ಸಾಕಬೇಕು? ಎಂಬೆಲ್ಲ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. 

ಸಚಿವರು, ಸಂಸದರು ಮತ್ತು ಶಾಸಕರು ಅಧಿಕಾರದ ಮದವನ್ನು ತಲೆಗೇರಿಸಿಕೊಂಡು ತಮಗಾರು ಇದಿರಿಲ್ಲ ಎಂಬ ರೀತಿ ವರ್ತಿಸುವುದು ಹೊಸದೇನೂ ಅಲ್ಲ. ಮಾಡಿದ ವ್ಯವಸ್ಥೆ ಸರಿಯಿರಲಿಲ್ಲ, ಗೌರವ ಕೊಡಲಿಲ್ಲ, ಪ್ರಶ್ನಿಸಿದರು ಇತ್ಯಾದಿ ಚಿಕ್ಕಪುಟ್ಟ ಕಾರಣಗಳಿಗೆ ಸರಕಾರಿ ನೌಕರರಿಗೆ ಕಪಾಳಮೋಕ್ಷ ಮಾಡಿದ, ದೈಹಿಕ ಹಲ್ಲೆ ನಡೆಸಿದ ಹಲವು ಘಟನೆಗಳು ಸಂಭವಿಸಿವೆ. ಜನಪ್ರತಿನಿಧಿಗಳಾಗುವುದೆಂದರೆ ಎಲ್ಲರಿಗೆ ಮತ್ತು ಎಲ್ಲ ನಿಯಮಗಳಿಗೆ ಅತೀತರಾಗಿರುವುದು ಎಂಬ ಪಾಳೇಗಾರಿಕೆ ಮನೋಭಾವ ಇದಕ್ಕೆ ಕಾರಣ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಶಿವಸೇನೆಯ ಸಂಸದ ರವೀಂದ್ರ ಗಾಯಕ್‌ವಾಡ್‌ ಪ್ರಕರಣ.

ಗಾಯಕ್‌ವಾಡ್‌ ಮಾ.23ರಂದು ಪುಣೆಯಿಂದ ದಿಲ್ಲಿಗೆ ಏರ್‌ ಇಂಡಿಯಾ ವಿಮಾನದ ಇಕಾನಾಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದಾರೆ. ಅಧಿವೇಶನ ನಡೆಯುತ್ತಿರುವಾಗ ಸಂಸದರಿಗೆ ದಿಲ್ಲಿ ಮತ್ತು ತಮ್ಮ ಕ್ಷೇತ್ರದ ನಡುವೆ ಓಡಾಡಲು ಬಿಸಿನೆಸ್‌ ಕ್ಲಾಸ್‌ ಸೌಲಭ್ಯವನ್ನು ಸರಕಾರ ನೀಡುತ್ತಿದೆ. ಆದರೆ ಗಾಯಕ್‌ವಾಡ್‌ ಪ್ರಯಾಣಿಸಿದ ವಿಮಾನದಲ್ಲಿ ಇದ್ದದ್ದು ಇಕಾನಾಮಿ ಕ್ಲಾಸ್‌ ಮಾತ್ರ. ಈ ವಿಚಾರವನ್ನು ಅವರ ಕಾರ್ಯದರ್ಶಿಗೆ ವಿಮಾನದ ಸಿಬಂದಿ ಮೊದಲೇ ತಿಳಿಸಿದ್ದರು. ಆದರೆ ದಿಲ್ಲಿ ತನಕ ಇಕಾನಾಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಗಾಯಕ್‌ವಾಡ್‌ಗೆ ಇದರಿಂದ ತಮ್ಮ ಅಂತಸ್ತಿಗೆ ಅವಮಾನವಾಗಿದೆ ಎಂದು ಅನ್ನಿಸಿದೆ. ದಿಲ್ಲಿಯಲ್ಲಿ ವಿಮಾನದಿಂದ ಇಳಿಯದೇ ಪ್ರತಿಭಟಿಸಿದ್ದಾರೆ. ಕೊನೆಗೆ ಮನವೊಲಿಸಲು ಬಂದಿದ್ದ 60 ವರ್ಷದ ಹಿರಿಯ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲ ವಿಮಾನದ ಅಧಿಕಾರಿಗೆ 25 ಸಲ ಚಪ್ಪಲಿಯಿಂದ ಹೊಡೆದಿದ್ದೇನೆ ಎಂದು ಮಹಾನ್‌ ಸಾಧನೆ ಮಾಡಿದಂತೆ ಹೇಳಿಕೊಂಡಿದ್ದಾರೆ. ಇದು ಅಧಿಕಾರದ ಮದವಲ್ಲದೆ ಬೇರೇನೂ ಅಲ್ಲ. ಬಿಸಿನೆಸ್‌ ಕ್ಲಾಸ್‌ ಸೌಲಭ್ಯವೇ ಇಲ್ಲದ ವಿಮಾನದಲ್ಲಿ ಗೊತ್ತಿದ್ದೂ ಪ್ರಯಾಣಿಸಿ ಬಳಿಕ ತನಗೆ ಅವಮಾನವಾಗಿದೆ ಎಂದು ಹೇಳಿಕೊಂಡು ಅಧಿಕಾರದ ದರ್ಪವನ್ನು ಜಗಜ್ಜಾಹೀರುಪಡಿಸಿದ್ದಾರೆ.

ಹಿಂದಿನಿಂದಲೂ ಗಾಯಕ್‌ವಾಡ್‌ ಇಂತಹ ವರ್ತನೆಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ದಿಲ್ಲಿಯ ಮಹಾರಾಷ್ಟ್ರ ಸದನದ ಕ್ಯಾಂಟೀನ್‌ನಲ್ಲಿ ನೀಡಿದ ಚಪಾತಿ ಒಣಗಿ ಹೋಗಿದೆ ಎಂದು ಸಿಟ್ಟಿಗೆದ್ದು ಚಪಾತಿ ಮಾಡಿಕೊಟ್ಟಿದ್ದ ಮುಸ್ಲಿಂ ಹುಡುಗನ ಬಾಯಿಗೆ ತುರುಕಿದ್ದರು. ಆ ಬಡಪಾಯಿ ಹುಡುಗ ಆಗ ರಮ್ಜಾನ್‌ ಉಪವಾಸ ವ್ರತದಲ್ಲಿದ್ದ. ಬೇರೆ ಪಕ್ಷವಾಗಿದ್ದರೆ ಇಂತಹ ವಿವಾದಾಸ್ಪದ ವ್ಯಕ್ತಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೇಟ್‌ ನೀಡುವಾಗ ಎರಡೆರಡು ಸಲ ಯೋಚಿಸುತ್ತಿತ್ತು. ಆದರೆ ಶಿವಸೇನೆಯ ಪರಂಪರೆಯಲ್ಲಿ ಇಂತಹ ಹಲವು ನಾಯಕರು ಆಗಿಹೋಗಿದ್ದಾರೆ. ಹೀಗಾಗಿ ಯಾವ ಶಿವಸೇನೆ ನಾಯಕನೂ ಗಾಯಕ್‌ವಾಡ್‌ ವರ್ತನೆಯನ್ನು ಕನಿಷ್ಠ ಖಂಡಿಸುವ ಗೋಜಿಗೂ ಹೋಗಿಲ್ಲ. ಈ ಪ್ರಕರಣ ಜನಪ್ರತಿನಿಧಿಗಳಿಗೆ ಇಷ್ಟೆಲ್ಲ ಸೌಲಭ್ಯ ನೀಡುವ ಅಗತ್ಯವಿದೆಯೇ ಎಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಬಹುತೇಕ ಬಡವರನ್ನೇ ಪ್ರತಿನಿಧಿಸುವ ಸಂಸದರಿಗೇಕೆ ಪಂಚತಾರಾ ಸೌಲಭ್ಯದ ಐಷರಾಮಿ ಬದುಕು? ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬ ಏಕೈಕ ಕಾರಣಕ್ಕೆ ತೆರಿಗೆದಾರರ್ಯಾಕೆ ಐದು ವರ್ಷ ಅವರನ್ನು ಸಕಲ ಸವಲತ್ತುಗಳನ್ನು ಕೊಟ್ಟು ಸಾಕಬೇಕು? ಎಂಬೆಲ್ಲ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಸಂಸದರಿಗೆ ಮತ್ತು ಶಾಸಕರಿಗೆ ನೀಡುತ್ತಿರುವ ಸೌಲಭ್ಯಗಳು ಮತ್ತು ಉಚಿತ ಕೊಡುಗೆಗಳು ಮಿತಿ ಮೀರುತ್ತಿವೆ ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್‌ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಸೌಲಭ್ಯಗಳನ್ನು ಏಕೆ ಕಡಿತಗೊಳಿಸಬಾರದು/ ರದ್ದುಪಡಿಸಬಾರದು ಎಂದು ಕೇಂದ್ರದಿಂದ ವಿವರಣೆಯನ್ನು ಕೇಳಿದೆ. ಈ ಪ್ರಶ್ನೆಗೆ ಸರಕಾರ ಇನ್ನೂ ಉತ್ತರ ನೀಡಿಲ್ಲ.

Advertisement

ಕಾನೂನುಗಳನ್ನು ರಚಿಸುವುದು ಜನಪ್ರತಿನಿಧಿಗಳಾದರೂ  ಅವರೂ ಅದಕ್ಕೆ ಬದ್ಧರಾಗಿಬೇಕು. ಆದರೆ ಕೆಲವರಿಗೆ ಕಾನೂನು ರಚಿಸುವ ತಮಗೆ ಅದನ್ನು ಮುರಿಯುವ ಹಕ್ಕು ಇದೆ ಎಂಬ ಭಾವನೆ ಇರುತ್ತದೆ. ಇದು ಸೃಷ್ಟಿಗಿಂತ ಸೃಷ್ಟಿಕರ್ತ ಮೇಲು ಎಂಬ ಭಾವನೆ. ದೇಶ ಇಂತಹ ಅನೇಕ ನಾಯಕರನ್ನು ಕಂಡಿದೆ. ಡೌಲು ದೌಲತ್ತಿನ ಪರ್ವ ಮುಗಿದ ಬಳಿಕ ಇತಿಹಾಸ ಅವರನ್ನು ಕಸದ ಬುಟ್ಟಗೆ ಎಸೆದು ಮರೆತು ಬಿಟ್ಟಿದೆ. ಗಾಯಕ್‌ವಾಡ್‌ರಂಥವರು ಈ ವಾಸ್ತವವನ್ನು ತಿಳಿದುಕೊಂಡಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next