Advertisement

ಶಬರಿಮಲೆ ಪ್ರಸಾದ ವಿವಾದ: ಹೈ ಸೂಚನೆ

12:06 AM Nov 19, 2021 | Team Udayavani |

ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಪ್ರಸಾದದಲ್ಲಿ “ಹಲಾಲ್‌ ಪ್ರಮಾಣೀಕೃತ ಬೆಲ್ಲ’ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್‌ ಸೂಚಿಸಿದೆ.

Advertisement

ಈ ಬಗ್ಗೆ ಶಬರಿಮಲೆ ಕರ್ಮ ಸಮಿತಿ ಎಂಬ ಸಂಘಟನೆಯ ಎಸ್‌.ಜೆ.ಆರ್‌.ಕುಮಾರ್‌ ಎಂಬ­ವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದನ್ನು ಪುರಸ್ಕರಿಸಿದ ನ್ಯಾ| ಅನಿಲ್‌ ಕೆ.ನರೇಂದ್ರನ್‌ ಮತ್ತು ನ್ಯಾ| ಪಿ.ಜಿ.ಅಜಿತ್‌ ಕುಮಾರ್‌ ಅವರನ್ನೊ­ಳಗೊಂಡ ನ್ಯಾಯಪೀಠ, ದೇವಸ್ವಂ ಮಂಡಳಿ ಕಾರ್ಯದರ್ಶಿ, ಆಯುಕ್ತರು ಮತ್ತು ಶಬರಿಮಲೆ ದೇಗುಲದಲ್ಲಿರುವ ವಿಶೇಷ ಆಯುಕ್ತರಿಗೆ ವರದಿ ನೀಡುವಂತೆ ಸೂಚಿಸಿದೆ.

ದೇಗುಲಗಳಲ್ಲಿ ಪ್ರಸಾದ ಸಿದ್ಧಪಡಿಸಲು ಅನ್ಯ ಧರ್ಮೀಯರು ಪ್ರಮಾಣೀಕರಿಸಿದ ವಸ್ತುಗಳನ್ನು ಬಳಸಲಾಗುತ್ತಿರುವುದು ಖಂಡ­ನಾರ್ಹ ಎಂದು ಅರ್ಜಿಯಲ್ಲಿ ವಾದಿಸಲಾ­ಗಿದೆ. ಆದರೆ ಈ ಆರೋಪವನ್ನು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್‌ ತಿರಸ್ಕರಿಸಿ­ದ್ದಾರೆ. 2020ರಲ್ಲಿ ಮಹಾರಾಷ್ಟ್ರದ ಕಂಪೆನಿ ದೇಗುಲಕ್ಕೆ ಪೂರೈಸಿದ ಬೆಲ್ಲದ ಲೋಡ್‌ನ‌ ಒಂದು ಚೀಲದಲ್ಲಿ ಹಲಾಲ್‌ ಪ್ರಮಾಣೀಕರಣ ದಾಖಲೆ ಪತ್ತೆ­ಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಕಂಪೆನಿಯು, “ರಫ್ತು ಮಾಡುವ ಉದ್ದೇಶಕ್ಕೆಂದು ಹಲಾಲ್‌ ಪ್ರಮಾಣೀಕರಣವಿದ್ದ ಚೀಲಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೆವು. ಆ ಪೈಕಿ ಒಂದು ಚೀಲ ತಪ್ಪಾಗಿ ದೇಗುಲಕ್ಕೆ ಕಳುಹಿಸುವ ಲೋಡ್‌ನಲ್ಲಿ ಮಿಕ್ಸ್‌ ಆಗಿದೆ’ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ಆ ಬೆಲ್ಲದ ಗುಣಮಟ್ಟ ತೃಪ್ತಿಕರವಾ­ಗಿಲ್ಲದ್ದರಿಂದ ಪ್ರಸಾದ ತಯಾರಿಕೆಗೆ ಅವುಗಳನ್ನು ಬಳಕೆ ಮಾಡಲಾಗಿಲ್ಲ ಎಂದು ಕೋರ್ಟ್‌ಗೆ ಅನಂತಗೋಪನ್‌ ಮಾಹಿತಿ ನೀಡಿದ್ದಾರೆ.

ಮುಜರಾಯಿ ಸಚಿವರ ವಿವಾದ :

ಕೇರಳ ಮುಜರಾಯಿ ಸಚಿವ ಕೆ.ರಾಧಾಕೃಷ್ಣನ್‌ ಶಬರಿಮಲೆ ದೇಗುಲದ ಮುಂದೆ ಕೈಮುಗಿಯದೇ ನಿಂತಿದ್ದು ಹಾಗೂ ತೀರ್ಥ ಸ್ವೀಕರಿಸಲು ನಿರಾಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಗುರುವಾರ ಪ್ರತಿಕ್ರಿಯೆ ನೀಡಿದ ಸಚಿವ ರಾಧಾಕೃಷ್ಣನ್‌, “ನಂಬಿಕೆ ಎಂಬ ಕಾರಣಕ್ಕಾಗಿ ಯಾರೋ ಏನೋ ಹೇಳಿದರು ಎಂದು ಅದನ್ನು ಮಾಡುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ. ನಾನು ನನ್ನ ತಾಯಿಗೆ ಪ್ರತಿದಿನ ಕೈಮುಗಿದು ನಮಸ್ಕರಿಸುವುದಿಲ್ಲ. ಹಾಗೆಂದು ಅವರ ಮೇಲೆ ಗೌರವ, ಪ್ರೀತಿ ಇಲ್ಲ ಎಂದು ಅರ್ಥವೇ’ ಎಂದು ಪ್ರಶ್ನಿಸಿದ್ದಾರೆ. ಮುಖ್ಯ ಅರ್ಚಕರು ತೀರ್ಥ ನೀಡಿದಾಗ ಸಚಿವರು ಅದನ್ನು, ಸೇವಿಸದೇ, ಸ್ಯಾನಿಟೈಸರ್‌ನಂತೆ ಕೈ ಉಜ್ಜಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next