Advertisement

ಅಡಿಕೆ ಹಾನಿಕರವಲ್ಲ ಎಂದು ಶ್ರುತಪಡಿಸಲು ಕೇಂದ್ರಕ್ಕೆ ವರದಿ: ಹೆಗಡೆ

07:00 AM Apr 01, 2018 | Team Udayavani |

ಮಂಗಳೂರು: ಅಡಿಕೆ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಬಗ್ಗೆ ಅಂತಾರಾಷ್ಟ್ರೀಯ ಸಂಶೋಧಕರು, ದೇಶದ ವಿಜ್ಞಾನಿಗಳು ಸೇರಿ ಸಿದ್ಧಪಡಿಸಿರುವ ವರದಿಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವ ಅಂಶವನ್ನು ಒಪ್ಪಿಕೊಳ್ಳಲಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ತಿಳಿಸಿದರು. 

Advertisement

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವಿಚಾರ ಚರ್ಚೆಯಲ್ಲಿದ್ದು, ಅದಕ್ಕೆ ಪೂರಕವಾಗಿ ಕೆಲವೊಂದು ವರದಿಗಳೂ ಸಲ್ಲಿಕೆಯಾಗಿವೆ. ಅಡಿಕೆ ಒಂದು ಆಯುರ್ವೇದ ಔಷಧೀಯ ಗುಣವುಳ್ಳ ವಸ್ತು ಎಂಬ ಮಾಹಿತಿ ಜನಸಾಮಾನ್ಯರಲ್ಲಿ ಇತ್ತೇ ವಿನಾ ಅದು ಅಧಿಕೃತಗೊಂಡಿರಲಿಲ್ಲ. 

ಈ ನಿಟ್ಟಿನಲ್ಲಿ ಪ್ರಸ್ತುತ ಅಡಿಕೆ ಮತ್ತು ಮಾನವ ಆರೋಗ್ಯ ಎಂಬ ವರದಿಯೊಂದನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಎ. 4ರಂದು ಕೇಂದ್ರ ಆರೋಗ್ಯ, ಕೃಷಿ ಸಚಿವರು, ಕೆಲವು ಸಂಶೋಧನ ಸಂಸ್ಥೆಗಳಿಗೆ ನೀಡಲಿದ್ದೇವೆ. ಈ ವರದಿಯ ಮೂಲಕ ಕೇಂದ್ರ ಸರಕಾರಕ್ಕೆ ಅಡಿಕೆ ಹಾನಿಕಾರಕ ಅಲ್ಲ ಎಂಬುದನ್ನು ಶ್ರುತಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.  ನೂರಾರು ವರ್ಷಗಳಿಂದ ಅಡಿಕೆ ಸೇವನೆ: 15 ದಿನಗಳ ಹಿಂದೆ ಎಲ್ಲ ಸಂಸದರು, ಅಡಿಕೆ ಮಾರಾಟಗಾರ ಸಂಘಟನೆಗಳು ಜತೆಗೂಡಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿದ್ದೇವೆ. ಅಡಿಕೆ ಒಂದು ಔಷಧೀಯ ಗುಣಗಳಿರುವ ವಸ್ತು. ಅಡಿಕೆಯನ್ನು ನೂರಾರು ವರ್ಷಗಳಿಂದ ನಾವು ನಿರಾತಂಕವಾಗಿ ಸೇವಿಸಿಕೊಂಡು ಬಂದಿದ್ದೇವೆ ಎಂಬ ವಿಚಾರ ಮುನ್ನೆಲೆಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದ್ದು, ಅದಕ್ಕೆ ನಮಗೆ ಮೊದಲ ಯಶಸ್ಸು ಸಿಕ್ಕಿದೆ ಎಂದರು.

ಅನಾವಶ್ಯಕ ಗೊಂದಲ, ಗುಟ್ಕಾದಿಂದ ಕೆಟ್ಟ ಹೆಸರು: ಕೆಲವರು ಅನಾವಶ್ಯಕವಾಗಿ ಅಡಿಕೆ ಬೆಳೆಗಾರರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಅಡಿಕೆ ಎಂದರೆ ಏನು ಎಂದು ಗೊತ್ತಿಲ್ಲದವರು ಕೂಡ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಡಿಕೆಗೆ ವಿಷಕಾರಿ ಅಂಶಗಳನ್ನು ಸೇರಿಸಿ ಗುಟ್ಕಾ ತಯಾರಿಸುವುದರಿಂದ ಅಡಿಕೆಗೂ ಕೆಟ್ಟ ಹೆಸರು ಬರುವಂತೆ ಮಾಡಲಾಗಿದೆ. ಆದರೆ ಅಡಿಕೆ ಬೆಳೆಗಾರರು ಯಾವುದೇ ಗೊಂದಲಕ್ಕೀಡಾಗಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಅಡಿಕೆಗೆ ಸೂಕ್ತ ಮಾರುಕಟ್ಟೆ, ತಾಂತ್ರಿಕ ಸಿದ್ಧತೆ ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next