ಇಸ್ಲಾಮಾಬಾದ್ : ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ದೇಶದ ಸಶಸ್ತ್ರ ಪಡೆಗಳ ವಿರುದ್ಧ ಜನರಲ್ಲಿ ದ್ವೇಷ ಭಾವನೆ ಮೂಡಿಸುತ್ತಿದ್ದಾರೆ; ಸೇನೆಯ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಮತ್ತು ಸೇನೆಯ ವಿರುದ್ಧ ಅವರನ್ನು ಪ್ರಚೋದಿಸುತ್ತಿದ್ದಾರೆ ಎಂಬ ವರದಿಯನ್ನು ಪಾಕ್ ಪೊಲೀಸರು ದಾಖಲಿಸಿಕೊಂಡಿದ್ದಾರೆ.
“ಐಎಂ ಪಾಕಿಸ್ಥಾನ್’ ಪಕ್ಷದ ಅಧ್ಯಕ್ಷ ತಾನೆಂದು ಹೇಳಿಕೊಂಡಿರುವ ವಕೀಲ ಇಷ್‌ತಿಯಾಕ್ ಅಹ್ಮದ್ ಮಿರ್ಜಾ, ತಾನು ಸಿದ್ಧಪಡಿಸಿರುವ ಈ ವರದಿಯನ್ನು ರಾವಲ್ಪಿಂಡಿಯ ಸಿವಿಲ್ ಲೈನ್ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ. ಅಂತೆಯೇ ಪೊಲೀಸರು ಆ ವರದಿಯನ್ನು ದಾಖಲಿಸಿಕೊಂಡಿದ್ದಾರೆ.
ಪೊಲೀಸರು ದಾಖಲಿಸಿಕೊಂಡಿರುವ ಈ ಒಂದು ಪುಟದ ವರದಿಯು ಎಫ್ಐಆರ್ ಅಲ್ಲ; ಆದನ್ನು ಸ್ಥಳೀಯವಾಗಿ “ರೋಜ್‌ನಾಮಾ’ ಎಂದು ಕರೆಯಲಾಗುತ್ತದೆ.
ಡಾನ್ ಸುದ್ದಿ ಪತ್ರಿಕೆ ಮಾಡಿರುವ ವರದಿ ಪ್ರಕಾರ ಮಿರ್ಜಾ ಅವರಿಗೆ ವಾಟ್ಸಾಪ್‌ನಲ್ಲಿ ಒಂದು ವಿಡಿಯೋ ಚಿತ್ರಿಕೆ ಸಿಕ್ಕಿದೆ. ಅದರಲ್ಲಿ ಪ್ರಧಾನಿ ಷರೀಫ್ ಅವರೇ ಖುದ್ದಾಗಿ ದೇಶದ ಸೇನೆಯ ವಿರುದ್ಧ ಜನರನ್ನು ಪ್ರಚೋದಿಸುವ, ಎತ್ತಿಕಟ್ಟುವ ಮತ್ತು ಅವರಲ್ಲಿ ಸೇನೆಯ ವಿರುದ್ಧ ವೈಷಮ್ಯ ಮೂಡಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ.
ಇದರ ಆಧಾರದಲ್ಲಿ ಪಿಎಂಎಲ್‌ಎನ್ ಪಕ್ಷದ ಮುಖ್ಯಸ್ಥರಾಗಿರುವ ಪ್ರಧಾನಿ ಷರೀಫ್ ವಿರುದ್ಧ ಕೇಸು ದಾಖಲಿಸಬೇಕೆಂದು ಮಿರ್ಜಾ ಪೊಲೀಸರನ್ನು ಆಗ್ರಹಿಸಿದ್ದಾರೆ.
ಮಿರ್ಜಾ ಹೇಳುವಂತೆ ತಮ್ಮ ಪಕ್ಷ ಪಾಕಿಸ್ಥಾನದ ಚುನಾವಣಾ ಆಯೋಗದಲ್ಲಿ ನೋಂದಾವಣೆಗೊಂಡಿದೆ.
ಅಂದ ಹಾಗೆ ಪಾಕಿಸ್ಥಾನದ 70 ವರ್ಷಗಳ ಇತಿಹಾಸದಲ್ಲಿ ಪಾಕ್ ಸೇನೆ 33 ವರ್ಷಗಳಿಗೂ ಮೀರಿ ಅಧಿಕಾರ ನಡೆಸಿದ್ದು ಆ ಮೂಲಕ ದೇಶದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.