ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ಧಪಡಿಸಿದೆ. ಹೀಗಾಗಿ, ಅದನ್ನು ಯಥಾವತ್ ಆಗಿ ಸರಕಾರ ಸ್ವೀಕರಿಸಬೇಕು. ಅದನ್ನು ಆಯೋಗದ ಹಾಲಿ ಅಧ್ಯಕ್ಷರು ಸರಕಾರಕ್ಕೆ ಸಲ್ಲಿಕೆ ಮಾಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್.ಕಾಂತರಾಜು ಕಾನೂನಿನಲ್ಲಿ ಆಯೋಗದ ವರದಿ ಮರುಪರಿಶೀಲನೆಗೆ ಅವಕಾಶವಿಲ್ಲ. ಸರಕಾರಕ್ಕೆ ಮಾತ್ರ ಅದು ಸಾಧ್ಯ. ಕೆಲವರು ಈ ವರದಿ ಸೋರಿಕೆಯಾಗಿದೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಸೋರಿಕೆ ಆಗಿರುವುದನ್ನು ಸಾಬೀತುಮಾಡಲಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ತಜ್ಞರ ಸಲಹೆ ಪಡೆದು ವರದಿ ತಯಾರಿಸಲಾಗಿದೆ ಎಂದು ಹೇಳಿದರು.
55 ಪ್ರಶ್ನಾವಳಿಗಳನ್ನು ತೆಗೆದುಕೊಂಡು ವರದಿ ತಯಾರಿಸಲಾಗಿದೆ. ಅದರಲ್ಲಿ ಜಾತಿ, ಧರ್ಮ, ಉದ್ಯೋಗ, ಆರ್ಥಿಕತೆ, ಬ್ಯಾಂಕ್ ಖಾತೆ ಇದೆಯೇ ಎನ್ನುವುದೂ ಸಹಿತ ಹಲವು ಪ್ರಶ್ನೆಗಳನ್ನು ಇರಿಸಲಾಗಿತ್ತು. ಸಮೀಕ್ಷಾ ವರದಿ ತಯಾರಾದಾಗಿನಿಂದ ರಾಜ್ಯ ಸರಕಾರ ಅದನ್ನು ಸ್ವೀಕರಿಸಬೇಕೆಂದು ಆಯೋಗ ಮನವಿ ಮಾಡುತ್ತಾ ಬಂದಿದೆ. ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೂ ವರದಿ ಸ್ವೀಕರಿಸುವಂತೆ ಮನವಿ ಮಾಡಲಾಗಿತ್ತು. ಅನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ಅವಕಾಶ ಕೋರಲಾಗಿತ್ತು. ಆದರೆ ಅವಕಾಶ ದೊರೆಯಲಿಲ್ಲ ಎಂದು ದೂರಿದರು.
ಸದಸ್ಯ ಕಾರ್ಯದರ್ಶಿಗೆ ನೀಡಲಾಗಿತ್ತು
2019ರ ಸೆ.21ರಂದು ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ಆಗ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಪಿ.ವಸಂತಕುಮಾರ್ ಅವರಿಗೆ ಸಮೀಕ್ಷೆ ವರದಿ ನೀಡಲಾಗಿತ್ತು. ಆಯೋಗ ಸಂಗ್ರಹಿಸಿದ ಮಾಹಿತಿಯನ್ನು ಅಧ್ಯಕ್ಷರು, ಎಲ್ಲ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ಸಹಿ ಮಾಡಿ ದೃಢೀಕರಿಸಿರುತ್ತಾರೆ. ಈ ಅವಧಿಯಲ್ಲಿ 3 ಜನ ಸದಸ್ಯ ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸಿದ್ದು, ಕಾಲಾವಧಿಗೆ ತಕ್ಕಂತೆ ಎಲ್ಲ ಸಂಪುಟಗಳಿಗೂ ಎಲ್ಲ ದತ್ತಾಂಶಗಳಿಗೂ ಸಹಿ ಮಾಡಿದ್ದಾರೆ ಎಂದು ಹೇಳಿದರು.
ಆಯೋಗ ತಯಾರಿಸಿರುವ ವರದಿಯನ್ನು ಅವೈಜ್ಞಾನಿಕ ಅಥವಾ ಸರಿಯಿಲ್ಲ ಎನ್ನುವುದು ಈ ಹಂತದಲ್ಲಿ ಸರಿಯಾಗುವುದಿಲ್ಲ. ನಾವು ತಯಾರಿಸಿರುವ ವರದಿಗಳು ಅತ್ಯಂತ ವೈಜ್ಞಾನಿಕವಾಗಿವೆ. ಆಯೋಗದ ವರದಿಯನ್ನು ಸರಕಾರ ಬಿಡುಗಡೆ ಮಾಡಿ ಅವರಿಂದ ಸ್ವೀಕೃತಿ ಪಡೆಯಲಾಗಿದೆ. ವರದಿಯನ್ನು ಸರಕಾರ ಬಿಡುಗಡೆ ಮಾಡಿದ ಬಳಿಕ ಪರಿಶೀಲಿಸಿ, ಅಧ್ಯಯನ ಮಾಡಿ, ಅಭಿಪ್ರಾಯ ತಿಳಿಸುವುದು ಸೂಕ್ತ ಎಂದರು.