ಬೆಂಗಳೂರು: ನೊರೆ- ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆಳ್ಳಂದೂರು ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಹಲವು ನಿರ್ದೇಶನ ನೀಡುತ್ತಿದ್ದರೂ ಕೆರೆಯಲ್ಲಿ ನೊರೆ ನಿಯಂತ್ರಣ ಕಾರ್ಯ ಪರಿಣಾಮಕಾರಿಯಾಗಿ ನಡೆದಿಲ್ಲ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಕೆರೆ ಕೋಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡು ಗಾಳಿಯಲ್ಲಿ ತೇಲಾಡುತ್ತಿರುವುದರಿಂದ ವಾಹನ ಬಳಕೆದಾರರು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಬಿಡಿಎ ಒಂದಿಷ್ಟು ಕ್ರಮ ಕೈಗೊಂಡಿದ್ದರೂ ನೊರೆ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯರು ಅನಾರೋಗ್ಯಕರ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.
ಸೋಮವಾರ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದ ನಂತರ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಕೋಡಿಯಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಸಂಗ್ರಹವಾಗಿತ್ತು. ಮಳೆ ಮುಂದುವರಿದಂತೆ ಕೆರೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ನೊರೆ ಪ್ರಮಾಣವೂ ಹೆಚ್ಚಾಗಿದೆ. ಕೋಡಿ ಭಾಗದಲ್ಲಿ ಐದಾರು ಅಡಿ ಎತ್ತರದಷ್ಟು ದಟ್ಟ ನೊರೆ ಕಾಣಿಸಿಕೊಂಡು ಗಾಳಿ ಬೀಸಿದಂತೆಲ್ಲಾ ನೊರೆ ತೇಲಾಗುತ್ತಿವೆ. ಕೆಲವೆಡೆ ರಸ್ತೆಯಲ್ಲೇ ಅಡಿಗಟ್ಟಲೇ ನೊರೆ ಶೇಖರಣೆಯಾಗಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ, ತ್ರಿಚಕ್ರ ವಾಹನ ಚಾಲಕರು, ಪ್ರಯಾಣಿಕರು ನೊರೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಏಕೆಂದರೆ ವಿಷಯುಕ್ತ ರಾಸಾಯನಿಕ ಸೇರ್ಪಡೆಯಿಂದಾಗಿ ನೊರೆ ಚರ್ಮಕ್ಕೆ ಸೋಕಿದ ಭಾಗದಲ್ಲಿ ಕೆಂಪು ಕಲೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಈ ಭಾಗದಲ್ಲಿ ಓಡಾಡಲು ಆತಂಕಪಡುವಂತಾಗಿದೆ.
ಬಿಡಿಎ ಅಲ್ಪಾವಧಿ ಕ್ರಮವೆಂಬಂತೆ ಕೆರೆಯಲ್ಲಿ ಸಂಗ್ರಹವಾಗಿರುವ ಜೊಂಡು, ಕಳೆ ಸಸಿ ತೆರವು ಕಾರ್ಯ ಮುಂದುವರಿಸಿದೆ. ದೀರ್ಘಾವಧಿ ಕ್ರಮವಾಗಿ ಯಾವ ವಿಧಾನದಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಬಿಡಿಎ ಆಯುಕ್ತರ ಅಧ್ಯಕ್ಷತೆಯ ತಜ್ಞರ ಸಮಿತಿಯು ಚರ್ಚೆ ನಡೆಸುತ್ತಿದ್ದು, ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯಲು ನಿರ್ಧರಿಸಿದೆ.
ಕೆರೆ ಸಂರಕ್ಷಣೆ ಕಾರ್ಯ ತೃಪ್ತಿಕರವಾಗಿಲ್ಲ
ಬೆಳ್ಳಂದೂರು ಕೆರೆ ಅವ್ಯವಸ್ಥೆಯನ್ನು ಮುಖ್ಯಮಂತ್ರಿಗಳೇ ಸ್ವತಃ ಪರಿಶೀಲಿಸಿ ಅಭಿವೃದ್ಧಿಪಡಿಸುವಂತೆ ಸೂಚಿಸಿದರೂ, ಎನ್‌ಜಿಟಿ ಕೂಡ ಸಾಕಷ್ಟು ನಿರ್ದೇಶನ ನೀಡಿದ ನಂತರವೂ ಕೆರೆ ಸಂರಕ್ಷಣೆ ಕಾರ್ಯ ತೃಪ್ತಿಕರವಾಗಿಲ್ಲ. ಕೆರೆಯ ಕಳೆಸಸಿ ತೆರವು ಕಾರ್ಯವನ್ನು ಬಿಡಿಎ ಕೈಗೊಂಡಿರುವುದು ಹೊರತುಪಡಿಸಿದರೆ ಇತರೆ ಸಂರಕ್ಷಣೆ ಕಾರ್ಯಗಳು ಶುರುವಾಗದ ಕಾರಣ ಕೆರೆಯ ಅವ್ಯವಸ್ಥೆ ಮುಂದುವರಿದಿದೆ ಎಂದು ಬೆಳ್ಳಂದೂರು ವಾರ್ಡ್‌ನ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಜ್ಯೋತಿ ರಂಜನ್ ತಿಳಿಸಿದರು.