ಕಡಬ: ತಾಲೂಕು ಕೇಂದ್ರವಾಗಿರುವ ಕಡಬ ಪೇಟೆ ಗ್ರಾಮ ಪಂಚಾಯತ್‌ನಿಂದ ಪಟ್ಟಣ ಪಂಚಾಯತ್ ವ್ಯವಸ್ಥೆಗೆ ಮೇಲ್ದರ್ಜೆಗೇರಿದೆ. ಪೇಟೆ ಹಾಗೂ ಪರಿಸರದಲ್ಲಿ ಕೆಲವು ಕಡೆ ರಸ್ತೆಯ ಬದಿಯಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆನೀರು ರಸ್ತೆಯಲ್ಲಿಯೇ ಹರಿದುಹೋಗುತ್ತಿದ್ದರೆ, ಪೇಟೆಯ ಚರಂಡಿಗಳಲ್ಲಿ ಸಂಗ್ರಹವಾದ ಮಳೆನೀರು ತೋಡುಗಳಿಗೆ ಹರಿದುಹೋಗುವ ದಾರಿಗಳಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಕಸಕಡ್ಡಿಗಳು ಸೇರಿಕೊಂಡು ನೀರಿನ ಹರಿವಿಗೆ ತಡೆಯಾಗುತ್ತಿದೆ. ಮಳೆಗಾಲ ಆರಂಭವಾಗುವ ಮೊದಲೇ ನೀರು ಹರಿದುಹೋಗುವ ಮಾರ್ಗಗಳಲ್ಲಿನ ತೊಡಕುಗಳನ್ನು ನಿವಾರಿಸಿದರೆ ಅಲ್ಲಲ್ಲಿ ಉಂಟಾಗುವ ಕೃತಕ ನೆರೆಯನ್ನು ನಿವಾರಿಸಬಹುದು.
ಗಿಡಗಂಟಿ, ಹೂಳು ತೆರವು ಅಗತ್ಯ
ಕಡಬ ಪೇಟೆ ಬೆಳೆಯುತ್ತಿರುವುದರಿಂದ ಈಗಿನ ಒಳಚರಂಡಿ ವ್ಯವಸ್ಥೆ ಏನೇನೂ ಸಾಲದು. ಪೇಟೆಯಲ್ಲಿನ ಚರಂಡಿಗಳಿಂದ ಹರಿಯುವ ಮಳೆನೀರು ಬೈಲಿನ ಭಾಗಕ್ಕೆ ಹೋಗುವ ಸಣ್ಣ ತೋಡುಗಳಲ್ಲಿನ ಕಸಕಡ್ಡಿಗಳನ್ನು ತೆರವುಗೊಳಿಸಿ ಹೂಳೆತ್ತಿದರೆ ತತ್‌ಕ್ಷಣದ ಸಮಸ್ಯೆ ಬಗೆಹರಿಯಲು ಸಾಧ್ಯ. ಅಂಗಡಿ, ಮನೆ, ಕಾಲನಿ ಬಳಿಯ ದ್ರವ ತ್ಯಾಜ್ಯ ಸಂಸ್ಕರಣ ಘಟಕದ ಪಕ್ಕದಿಂದ ಬೈಲಿನ ಕಡೆಗೆ ಮಳೆನೀರು ಹರಿದು ಹೋಗುವ ಸಣ್ಣ ತೋಡಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಗಿಡಗಂಟಿಗಳು ಹಾಗೂ ಹೂಳು ತುಂಬಿಕೊಂಡಿದೆ. ಹೀಗಾಗಿ ಕಾಲನಿಯಿಂದ ಹರಿದು ಬರುವ ಕೊಳಚೆ ನೀರು ಅಲ್ಲಲ್ಲಿಯೇ ಸಂಗ್ರಹವಾಗಿ ದುರ್ವಾಸನೆಗೆ ಕಾರಣವಾಗುತ್ತಿದೆ. ಹಾಗೆಯೇ ಕಡಬ ಪೇಟೆಯ ಸಂತೆಕಟ್ಟೆಯ ಪರಿಸರದ ಚರಂಡಿಗಳ ನೀರು ಹರಿದು ತೋಡು ಸೇರುವಲ್ಲಿ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ತಡೆಯುಂಟಾಗುತ್ತಿದೆ. ಮಳೆಗಾಲಕ್ಕೆ ಮೊದಲು ಈ ಎಲ್ಲ ತಡೆಗಳನ್ನು ತೆರವುಗೊಳಿಸಿದರೆ ಮಳೆನೀರು ಸರಾಗವಾಗಿ ತೋಡು ಸೇರಲು ತೊಂದರೆಯಾಗದು.
ಪೇಟೆ ಪರಿಸರದಲ್ಲಿಯೂ ಕೃತಕ ನೆರೆ
ಪೇಟೆಯ ಕೆಲವು ಕಡೆ ಚರಂಡಿಯಲ್ಲಿಯೇ ಕುಡಿಯುವ ನೀರಿನ ಪೈಪ್‌ಗ್ಳು ಹಾದುಹೋಗಿರುವುದರಿಂದ ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಕಸಕಡ್ಡಿ ಸಿಲುಕಿಕೊಂಡು ನೀರು ಹರಿದುಹೋಗಲು ತೊಡಕಾಗಿದೆ. ಕಡಬ ಪೇಟೆಯ ಅಡ್ಡಗದ್ದೆ ಕಾಲೇಜು ರಸ್ತೆ, ಪಂಜ ರಸ್ತೆ ಹಾಗೂ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿಯೂ ನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗುತ್ತಿದೆ.
ಟೆಂಡರ್ ಕರೆದು ಕಾಮಗಾರಿ
ಕಡಬ ಪ.ಪಂ. ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಚರಂಡಿಗಳ ನಿರ್ಮಾಣಕ್ಕೂ ಅವಕಾಶವಿದೆ. ಕ್ರಿಯಾ ಯೋಜನೆ ತಯಾರಿಸಿ ಟೆಂಡರ್ ಕರೆದು ಕಾಮಗಾರಿ ನಡೆಸಬೇಕಿರುವುದರಿಂದ ಮಳೆಗಾಲಕ್ಕೆ ಮೊದಲು ಆ ಅನುದಾನ ಉಪಯೋಗಿಸುವುದು ಕಷ್ಟಸಾಧ್ಯ. ಆದ್ದರಿಂದ ತುರ್ತಾಗಿ ಆಗಬೇಕಿರುವ ತೋಡುಗಳಲ್ಲಿನ ತ್ಯಾಜ್ಯ, ಗಿಡಗಂಟಿ ತೆರವು ಹಾಗೂ ಹೂಳೆತ್ತುವ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಮಳೆನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ಪ.ಪಂ. ಮುಖ್ಯಾಧಿಕಾರಿ ಪಕೀರ ಮೂಲ್ಯ ತಿಳಿಸಿದ್ದಾರೆ.