ಕುಂದಾಪುರ: ಕಳೆದ ಕೆಲವು ಸಮಯಗಳಿಂದ ನಗರದ ಪ್ರಮುಖ ವೃತ್ತಗಳಲ್ಲಿ ದೀಪ ಬೆಳಗದೇ ಕತ್ತಲೆಯಾಗಿ ಸಮಸ್ಯೆಯಾಗುತ್ತಿತ್ತು. ಅಂತೆಯೇ ಸರ್ವಿಸ್ ರಸ್ತೆಯಿಂದ ನಗರದೊಳಗೆ ಬರುವ ಕೂಡು ರಸ್ತೆಗಳಿಗೆ ಸಂಪರ್ಕಕ್ಕೆ ನಾದುರಸ್ತಿಯಿಂದ ಸಮಸ್ಯೆಯಾಗುತ್ತಿತ್ತು. ಇದೀಗ ಪುರಸಭೆ ಇವೆರಡರ ಕುರಿತು ಗಮನ ಹರಿಸಿ ಸರಿಪಡಿಸಿದೆ.
ನಗರದ ಶಾಸ್ತ್ರಿ ಸರ್ಕಲ್ ಪ್ರಮುಖ ಜಂಕ್ಷನ್ ಆಗಿದ್ದು ನಗರದೊಳಗೆ ಪ್ರವೇಶಕ್ಕೆ ಇರುವ ಪ್ರಮುಖ ಸ್ವಾಗತ ಜಾಗವಾಗಿದೆ. ಇಲ್ಲಿ ಹೈ ಮಾಸ್ಟ್ ದೀಪಗಳು ಬೆಳಗುತ್ತಿರಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿದ ಬಳಿಕ ಕತ್ತಲೆಯ ಕೂಪವಾಗಿ ಇರುತ್ತಿತ್ತು. ಪುರಸಭೆಯೇ ನಿರ್ಮಿಸಿಕೊಟ್ಟ ಬಸ್ ತಂಗುದಾಣಗಳಿದ್ದು ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಇಲ್ಲಿ ಇಳಿದಾಗ ಕತ್ತಲೆಯಿಂದ ಭಯ ಪಡುವ ಸ್ಥಿತಿ ಇತ್ತು.
ನಗರದೊಳಗೆ ಪ್ರವೇಶ ಪಡೆಯುತ್ತಿ ದ್ದಂತೆಯೇ ಪೌಲ್ ಹ್ಯಾರಿಸ್ ಅಥವಾ ಪಾರಿಜಾತ ಸರ್ಕಲ್‌ನಲ್ಲಿಯೂ ದೀಪಗಳು ಬೆಳಗುತ್ತಿರಲಿಲ್ಲ. ಕತ್ತಲೆಯಾದ ಕೂಡಲೆ ಪಾದಚಾರಿಗಳಿಗೆ, ದೂರುದೂರುಗಳಿಂದ ಬಂದು ನಗರದೊಳಗೆ ಹೋಗದೆ ಇಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುವ ವಾಹನಗಳಿದ್ದಾಗ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು.
ಇದನ್ನೂ ಓದಿ:ವಿಶೇಷಚೇತನರು-ವಯೋದ್ಧರಿಗೆ ಅಂಚೆ ಮತದಾನಕ್ಕೆ ಅವಕಾಶ
ಸರ್ವಿಸ್ ರಸ್ತೆಯಿಂದ ನಗರದೊಳಗೆ ಅಥವಾ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಪ್ರವೇಶಿಕೆ ಕಷ್ಟವಾಗುತ್ತಿತ್ತು. ಕುಂದೇಶ್ವರ ದ್ವಾರದ ಎದುರಿನಿಂದ ರಾಧಾ ಮೆಡಿಕಲ್ ಬಳಿಯಾಗಿ ಸರ್ವಿಸ್ ರಸ್ತೆಗೆ ಹೋಗುವಲ್ಲಿ ದ್ವಿಚಕ್ರ ವಾಹನ ಚಾಲಕರು, ರಿಕ್ಷಾ ಚಾಲಕರು ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ವಾಹನ ದಾಟಿಸಲು ಪರದಾಡುತ್ತಿದ್ದರು. ಇದಲ್ಲದೇ ನಂದಿಬೆಟ್ಟು ರಸ್ತೆ, ಶ್ರೀದೇವಿ ಆಸ್ಪತ್ರೆ ರಸ್ತೆ, ಎಲ್‌ಐಸಿ ರಸ್ತೆಯಲ್ಲೂ ಸಮಸ್ಯೆಗಳಿವೆ. ಈ ಕುರಿತು “ಉದಯವಾಣಿ’ “ಸುದಿನ’ ಅ.11ರಂದು “ಕತ್ತಲಲ್ಲಿ ವೃತ್ತಗಳು, ಸಂಪರ್ಕ ಕೂಡದ ರಸ್ತೆಗಳು’ ಎಂದು ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪುರಸಭೆ ಶಾಸ್ತ್ರಿ ಸರ್ಕಲ್ ಹಾಗೂ ಪೌಲ್ ಹ್ಯಾರಿಸ್ ಸರ್ಕಲ್‌ಗೆ ದೀಪಗಳನ್ನು ಅಳವಡಿಸಿದೆ. ರಾಧಾ ಮೆಡಿಕಲ್ ಬಳಿಯಿಂದ ಸರ್ವಿಸ್ ರಸ್ತೆಗೆ ಸೇರುವಲ್ಲಿ ತುರ್ತು ಆದ್ಯತೆ ನೆಲೆಯಲ್ಲಿ ದುರಸ್ತಿ ಪಡಿಸಿದೆ. ಉಳಿದ ರಸ್ತೆಗಳಿಗೆ ಕಾಯಕಲ್ಪ ಇನ್ನಷ್ಟೇ ಆಗಬೇಕಿದೆ. ಎಲ್‌ಐಸಿ ರಸ್ತೆ ಹಾಗೂ ಶ್ರೀದೇವಿ ಆಸ್ಪತ್ರೆ ರಸ್ತೆಯಲ್ಲಿ ವಾಹನಗಳು ಬೀಳುವ ಸ್ಥಿತಿಗೆ ಯಾವಾಗ ಕಡಿವಾಣ ಬೀಳಲಿದೆ ಎನ್ನುವುದು ಇನ್ನೂ ತಿಳಿದಿಲ್ಲ.
ಆದ್ಯತೆಯಲ್ಲಿ ದುರಸ್ತಿ
ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅನೇಕ ಬಾರಿ ಹೇಳಿದ್ದರೂ ಇನ್ನೂ ದುರಸ್ತಿ ಕಾರ್ಯ ನಡೆಸಿಲ್ಲ. ಸರ್ವಿಸ್ ರಸ್ತೆಯಿಂದ ಕೂಡು ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ತೊಂದರೆಯಾಗುತ್ತಿತ್ತು. ಇದೀಗ ಆದ್ಯತೆ ನೆಲೆಯಲ್ಲಿ ಪುರಸಭೆ ದುರಸ್ತಿ ಮಾಡಿದೆ.
-ವೀಣಾ ಭಾಸ್ಕರ ಮೆಂಡನ್
ಅಧ್ಯಕ್ಷರು, ಪುರಸಭೆ