ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿನ ಕಲ್ಲಹಳ್ಳ ಕೆರೆ ಕೋಡಿ ಬಿದ್ದು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ಮರಳು ಮೂಟೆಗಳಿಂದ ದುರಸ್ತಿ ಪಡಿಸಲಾಗಿದ್ದು, ಇದೀಗ ಹುಣಸೂರು-ಕೊಡಗು ಜಿಲ್ಲೆಯ ಕುಟ್ಟ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ಆ. 10ರಂದು ನಾಗರಹೊಳೆ ಉದ್ಯಾನ ಹಾಗೂ ಕೇರಳದಲ್ಲಿ ಬಿದ್ದ ಮಹಾ ಮಳೆಗೆ ರಸ್ತೆ ಬದಿಯ ಕಲ್ಲಹಳ್ಳ ಕೆರೆ ಭರ್ತಿಯಾಗಿ ನೀರು ರಸ್ತೆಗೆ ಹರಿದು ಕುಟ್ಟಕ್ಕೆ ತೆರಳುವ ರಸ್ತೆಯನ್ನೇ ಕೊಚ್ಚಿ ಹಾಕಿ, ಸೇತುವೆಯನ್ನು ಶಿಥಿಲಗೊಳಿಸಿತ್ತು. ಇದರಿಂದಾಗಿ ಕೊಡಗಿನ ಕಡೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಇದೀಗ ವಿರಾಜಪೇಟೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಭಾಗಕ್ಕೆ ಮರಳಿನ ಮೂಟೆಗಳನ್ನು ಜೋಡಿಸಿ, ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮಳೆಗಾಲದ ನಂತರ ಪೂರ್ಣ ಕಾಮಗಾರಿ ನಡೆಸುವುದಾಗಿ ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆಂದು ನಾಗರಹೊಳೆ ಉದ್ಯಾನದ ಅಧಿಕಾರಿ ಪೌಲ್ ಆಂಟೋನಿ
“ಉದಯವಾಣಿ’ಗೆ ತಿಳಿಸಿದ್ದಾರೆ.
ಬಸ್ ಸಂಚಾರಕ್ಕೆ ಮನವಿ: ಹುಣಸೂರು ಮಾರ್ಗ ನಾಗರಹೊಳೆ-ಕುಟ್ಟ ಹಾಗೂ-ಬಿರುನಾಣಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಹಾಗೂ ಉದ್ಯಾನದ ಸಿಬ್ಬಂದಿ ಓಡಾಟಕ್ಕೂ ತೊಂದರೆಯಾಗಿತ್ತು. ವೀರನಹೊಸಹಳ್ಳಿ ಮತ್ತಿತರ ಕಡೆಗಳಿಂದ ತರಕಾರಿ ಸಾಗಣೆ ಕೂಡ ಸ್ಥಗಿತಗೊಂಡಿತ್ತು. ಕೂಲಿ ಕಾರ್ಮಿಕರು ತೆರಳದಂತಾಗಿತ್ತು. ಇದೀಗ ರಸ್ತೆ ದುರಸ್ತಿಗೊಂಡಿದ್ದು,
ಮತ್ತೆ ಬಸ್ ಸಂಚಾರ ಆರಂಭಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ನಾಗರಹೊಳೆ, ಕುಟ್ಟ ಭಾಗದ ನಾಗರಿಕರು ಹಾಗೂ ಕೂಲಿ ಕಾರ್ಮಿಕರು ಆಗ್ರಹಿಸಿದ್ದರು. ಕೋಚ್ಚಿ ಹೋಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಿಂದಿನಂತೆ ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ರಸ್ತೆ, ಸೇತುವೆಗಳಿಗೆ ಹಾನಿ: ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಹುಣಸೂರು ತಾಲೂಕಿನಲ್ಲಿ ಸುಮಾರು 75 ಕಿ.ಮೀ. ರಸ್ತೆ ಹಾಗೂ ಪ್ರಮುಖ ಸೇತುವೆ ಸೇರಿದಂತೆ 10ಕ್ಕೂ ಹೆಚ್ಚು ಕಿರು ಸೇತುವೆಗಳು ಹಾನಿಯಾಗಿದ್ದು, ಶೀಘ್ರ ದುರಸ್ತಿ ಕಾರ್ಯ ಕೈಗೊಂಡು ವಾಹನಗಳ ಸಮರ್ಪಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.