Advertisement

ಸುರಿವ ಮಳೆಯಲ್ಲೇ ಮನೆ ರಿಪೇರಿ! ಎಲ್ಲಿಯದೋ ಈ ಅನುಬಂಧ…

06:34 PM Jul 31, 2023 | Team Udayavani |

“ಗೆಳೆಯರ ಬಳಗ’ ಜೊತೆಯಾಗುವುದು ಪಾರ್ಟಿ ಮಾಡುವ ಸಂಭ್ರಮದ ಘಳಿಗೆಯಲ್ಲಿ ಮಾತ್ರ ಅನ್ನುವುದು ಎಲ್ಲರ ಅನುಭವದ ಮಾತು. ಆದರೆ ಸಕಲೇಶಪುರಕ್ಕೆ ಸಮೀಪದ ರಕ್ಷಿದಿಯಲ್ಲಿ ಲೋಕ ಮೆಚ್ಚುವಂಥ ಕೆಲಸವನ್ನು ಅಲ್ಲಿನ ಗೆಳೆಯರು ಮಾಡಿದ್ದಾರೆ. ಅದು ಏನೆಂದರೆ…

Advertisement

ಕೆಲಸದ ನಿಮಿತ್ತ ನಾವು ವಾರದ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಹೋಗಿದ್ದೇವು. ಮೊನ್ನೆ ಶನಿವಾರ ಮತ್ತು ಭಾನುವಾರ ಬಿಡುವಿಲ್ಲದ ಕಾರ್ಯಗಳು ಮತ್ತು ಹಲವು ಗೆಳೆಯರ ಭೇಟಿ. ಕಾರ್ಯಕ್ರಮಗಳ ಮುಖ್ಯ ಆಹ್ವಾನಿತರಾದ ಪುರುಷೋತ್ತಮ ಬಿಳಿಮಲೆ, ಜುಲೈ 23ರ ಭಾನುವಾರ ಸಂಜೆ ರೈಲಿನಲ್ಲಿ ಮೈಸೂರಿನತ್ತ ಹೊರಟರು.

ನನಗೆ ಮಾರನೆಯ ದಿನ ಹೊನ್ನೇಮರಡುವಿನತ್ತ ಹೋಗುವ ಮನಸ್ಸಿತ್ತು. ಅಲ್ಲಿ ಸ್ವಾಮಿ ಅವರ ಜಲ ಸಾಹಸ ಕೇಂದ್ರಕ್ಕೆ ಹೋಗಬೇಕೆಂದಿದ್ದೇವು. ಹೋಗಿದ್ದರೆ ಸುಮಾರು ನಾಲ್ಕು ದಶಕಗಳ ಹಿಂದಿನ ಸ್ನೇಹವನ್ನು ಮತ್ತೆ ಸಂಭ್ರಮಿಸುವುದಿತ್ತು. ಸ್ವಾಮಿ ನನಗೆ ಮಡಿಕೇರಿಯ ಗೆಳೆಯ ಬಾಲಸುಬ್ರಹ್ಮಣ್ಯ ಹೊಸೂರು ಅವರ ಮೂಲಕ ಪರಿಚಯವಾದವರು (ಬಾಲು ಈಗ ನೆನಪು ಮಾತ್ರ). ನಾವು ಸಾಗರಕ್ಕೆ ಬರುವ ವಿಚಾರ ತಿಳಿದು ಇ ಮೇಲ್‌ ಮೂಲಕ ಫೋನ್‌ ನಂಬರ್‌ ಕೊಟ್ಟು ನಮ್ಮನ್ನು ಹೊನ್ನೇಮರಡಿಗೆ ಆಹ್ವಾನಿಸಿದ್ದರು ಸ್ವಾಮಿ.

ಆದರೆ ಭಾನುವಾರ ರಾತ್ರಿ ನಮ್ಮ ಮನೆಯಲ್ಲಿ ಒಂದು ಅವಗಢವಾಗಿತ್ತು. ಮನೆಯ ಅಂಗಳದ ಬದಿಯಲ್ಲಿ ಇದ್ದ ಮೂರೂವರೆ ದಶಕದ, ಗೊನೆ ತುಂಬಿದ ತೆಂಗಿನ ಮರ, ಗಾಳಿ ಮಳೆಗೆ ಮನೆಯ ಮೇಲೆ ಅಪ್ಪಳಿಸಿತ್ತು.ಬೆಳಗಾಗುತ್ತಿದ್ದಂತೆ ಊರಿನಿಂದ ಸುದ್ದಿ ಬಂತು. ಅಲ್ಲಿಂದಲೇ ನಮ್ಮ ಕಾಯಂ ಕೆಲಸದ ಸಹಾಯಕರಿಗೆ ಫೋನ್‌ ಮಾಡಿ- “ಎಷ್ಟು ಹಾನಿ ಆಗಿದೆ?’ ಎಂದೆ. “ಮೇಲಿನ ಮಾಡು ಮುರಿದಿದೆ. ಮುಂಭಾಗದಲ್ಲಿ ಕೂಡ ಹಾನಿ ಆಗಿದೆ. ಮನೆಯೊಳಗೆ ನೀರು, ಜೋರು ಮಳೆ ಏನು ಮಾಡುವುದು?’ ಎಂದರು. “ಸಾಧ್ಯವಾದರೆ ಮನೆ ಮಾಡಿಗೆ ಕಾಫಿ ಒಣಗಿಸುವ ಟಾರ್ಪಾಲ್‌ಗ‌ಳನ್ನು ಹೊದೆಸಿ ಹಗ್ಗದಿಂದ ಕಟ್ಟಿ. ಈಗ ಬೇಗ ಹೊರಟು ಬರುತ್ತೇವೆ. ಎಷ್ಟು ಬೇಗ ಹೊರಟರೂ ಅಲ್ಲಿಗೆ ತಲುಪುವಾಗ ನಾಲ್ಕು ಗಂಟೆ ಆಗಬಹುದು’ ಎಂದೆ.

Advertisement

ಸ್ವಲ್ಪ ಹೊತ್ತಿನಲ್ಲೇ ನಮ್ಮ ಗೆಳೆಯರ ಬಳಗ ನಮ್ಮ ಮನೆಯಲ್ಲಿ ಸೇರಿತ್ತು. ನಮ್ಮ ರಂಗತಂಡದ ವಿನಯ, ರಾಜಶೇಖರ್‌, ಪುರುಷೋತ್ತಮ, ಪಂಚಾಯತ್‌ ಮಾಜಿ ಉಪಾಧ್ಯಕ್ಷ ಶ್ರೀಧರ, ಹಾಲಿ ಪಂಚಾಯತ್‌ ಸದಸ್ಯ ಸಚಿನ್‌, ನೀರಗಂಟಿ ಪದ್ಮಪ್ಪ, ಸಂಜೀವ, ಕೃಷ್ಣ ದೇಜಪ್ಪ ಹೀಗೆ ಹಲವರು ಒಟ್ಟಾಗಿದ್ದರು.

ಮೊದಲಿಗೆ ಬಿದ್ದ ಮರವನ್ನು ಕತ್ತರಿಸಿ ತೆಗೆಯಬೇಕಿತ್ತು. ಶ್ರೀಧರ ತಮ್ಮ ಮರಗೆಲಸದ ತಂಡದೊಂದಿಗೆ ಮರಕೊಯ್ಯವ ಯಂತ್ರ ಹಿಡಿದು ಬಂದಿದ್ದರು. ರಾಜಶೇಖರ್‌ ಆಗಲೇ ಪಂಚಾಯತ್‌ ಮತ್ತು ಕಂದಾಯ ಇಲಾಖೆಯವರಿಗೆ ಸುದ್ದಿ ತಲುಪಿಸಿದ್ದರು.
ಆದರೆ ಸುರಿವ ಮಳೆಯಲ್ಲಿ ಮಾಡು ರಿಪೇರಿ ಮಾಡುವುದು ಹೇಗೆ? ನಮ್ಮ ತಂಡದ ಪುರುಷೋತ್ತಮ ಅತ್ಯುತ್ತಮ ಕಾರ್ಪೇಂಟರ್‌. ಟಾರ್ಪಾಲ್‌ ಹಾಕಿದರೆ ಈ ಗಾಳಿಮಳೆಗೆ ನಿಲ್ಲುವುದಿಲ್ಲ. ನಾನು ಮಾಡು ಹತ್ತಿ ರಿಪೇರಿ ಮಾಡುತ್ತೇನೆ. ನೀವೆಲ್ಲ ಸಹಾಯ ಮಾಡಿ, ಎಂದನಂತೆ. ಅದರಂತೆ ಕಾರ್ಯಾಚರಣೆ ಪ್ರಾರಂಭವಾಯಿತು. ಮಧ್ಯೆ ಮಧ್ಯೆ ನನಗೆ ಫೋನ್‌ ಬರುತ್ತಿತ್ತು. “ಗಡಿಬಿಡಿಯಲ್ಲಿ ಕಾರ್‌ ಓಡಿಸಿಕೊಂಡು ಬರಬೇಡಿ. ನಾವೆಲ್ಲ ಮಾಡುತ್ತೇವೆ!’-ಎನ್ನುತ್ತಿದ್ದರು.

ಜಾರುವಂತಿದ್ದ ಮಾಡಿಗೆ ಆ ಮಳೆಯಲ್ಲಿಯೇ ಹತ್ತಿ, ಮುರಿದುಹೋದ ಪಕ್ಕಾಸು-ರೀಪುಗಳನ್ನು ಕತ್ತರಿಸಿ ತೆಗೆದು ಮತ್ತೆ ಬೇರೆಯದನ್ನು ಜೋಡಿಸಿ, ಅಲ್ಲಿಂದಿಲ್ಲಿಂದ ಹೆಂಚುಗಳನ್ನೂ ಹುಡುಕಿತಂದು ಮಧ್ಯಾಹ್ನದ ವೇಳೆಗೆ ಮಾಡನ್ನು ಸೋರದಂತೆ ಮೊದಲಿನ ಸ್ಥಿತಿಗೆ ತಂದಿದ್ದರು!! ಜೊತೆಯಲ್ಲಿಯೇ ಎಲ್ಲ ವಿವರಗಳು ಫೋಟೋಗಳಾಗಿ ವಾಟ್ಸ್‌ಆಪ್‌ನಲ್ಲಿ ನಮಗೆ ಬರುತ್ತಿತ್ತು!
ಕಂದಾಯ ಮತ್ತು ಪಂಚಾಯತ್‌ ಅಧಿಕಾರಿಗಳೂ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದರು. ನಮಗೂ ಬರುವಾಗ ದಾರಿಯುದ್ದಕ್ಕೂ ಮಳೆ. ಊರು ತಲುಪುವಾಗ ಸಂಜೆ 5 ಗಂಟೆ.ಮನೆ ಮಾಲೀಕರೇ ಇಲ್ಲ. ನಾವೇನ್‌ ಮಾಡೋಕಾಗುತ್ತೆ ಎಂದುಕೊಂಡು ಗೆಳೆಯರು ಸುಮ್ಮನಿರಬಹುದಿತ್ತು. ಆದರೆ ಇದು ಅವರದೇ ಮನೆ ಎಂದುಕೊಂಡು ಕಾಪಾಡಿದ ರಂಗ ಬಂಧುಗಳಿಗೆ… ಸಾವಿರದ ಶರಣು.

*ಪ್ರಸಾದ್‌ ರಕ್ಷಿದಿ

Advertisement

Udayavani is now on Telegram. Click here to join our channel and stay updated with the latest news.

Next