ಹನೂರು: ತಾಲೂಕಿನ ಒಡೆಯರಪಾಳ್ಯ – ಹಿರಿಯಂಬಲ ಮಾರ್ಗ ಮಧ್ಯದ ಉಡುತೊರಹಳ್ಳಕ್ಕೆ ನಿರ್ಮಿಸಲಾಗಿರುವ ಮುಳುಗು ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು ಘೋರ ದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಸೇತುವೆ ದುರಸ್ತಿಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ಒಡೆಯರಪಾಳ್ಯ ಕೇಂದ್ರಸ್ಥಾನದಿಂದ 27 ಟಿಬೇಟಿಯನ್ ವಿಲೇಜ್‌ಗಳು, ಆದಿವಾಸಿ ಸೋಲಿಗರು ವಾಸಿಸುವ ಹಿರಿಯಂಬಲ, ಕತ್ತೆಕಾಲುಪೋಡು, ಗುಂಡಿಮಾಳ, ಹೊಸಪೋಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಉಡೊತೊರೆಹಳ್ಳ (ಸುಮುª ಹಳ್ಳ) ಹರಿಯುತ್ತಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸರಿ ಸುಮಾರು 4 ಸಾವಿರ ಜನರು ದೈನಂದಿನ ವ್ಯವಹಾರಕ್ಕೆ, ಬ್ಯಾಂಕ್ ವಹಿವಾಟಿಗೆ, ಆಸ್ಪತ್ರೆಗೆ ಇನ್ನಿತರ ಕೆಲಸ ಕಾರ್ಯಗಳಿಗೆ ಸಂಚಾರ ನಡೆಸುತ್ತಿದ್ದಾರೆ.
ಮುಳುಗು ಸೇತುವೆ ಶಿಥಿಲಾವಸ್ಥೆಯಲ್ಲಿ: ಈ ಹಳ್ಳಕ್ಕೆ ನಿರ್ಮಿಸಿರುವ ಮುಳುಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸಿಮೆಂಟ್ ಕಾಂಕ್ರೀಟ್, ಕಲ್ಲುಗಳು ಕಿತ್ತು ಬಂದಿದ್ದು ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಅಲ್ಲದೆ ಸೇತುವೆ ಬದಿಯಲ್ಲಿ ಕುಡಿಯುವ ನೀರನ್ನು ಕೊಂಡೊಯ್ಯುವ ಪೈಪ್ ಕಾಣುತ್ತಿದೆ. ಸೇತುವೆ ನಿರ್ಮಾಣದ ವೇಳೆ ಅಳವಡಿಸಿರುವ ಬೃಹತ್ ಸಿಮೆಂಟ್ ಪೈಪ್ ಕಾಣುತ್ತಿದ್ದು ಇದೀಗ ವಾಹನಗಳು ಆ ಪೈಪಿನ ಬಲದ ಮೇಲೆಯೇ ಓಡಾಡುವಂತಾಗಿದೆ. ಅಲ್ಲದೆ ಸೇತುವೆ ಮಧ್ಯಭಾಗದಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ದ್ವಿಚಕ್ರ ವಾಹನಗಳು, ಬಸ್ ಸೇರಿದಂತೆ ಇನ್ನಿತರ ವಾಹನಗಳು ಸೇತುವೆಯ ಅಂಚಿನಲ್ಲಿಯೇ ಓಡಾಡುತ್ತಿದ್ದು ಜೀವಭಯದಿಂದಲೇ ವಾಹನ ಚಾಲನೆ ಮಾಡುವಂತಾಗಿದೆ.
ಮಳೆಗಾಲದಲ್ಲಿ ಉಕ್ಕಿಹರಿಯುವ ಹಳ್ಳ: ಮಳೆಗಾಲದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಉಡುತೊರೆಹಳ್ಳವು ಉಕ್ಕಿ ಹರಿಯುತ್ತಿದೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಮುಳುಗು ಸೇತುವೆಯೂ ಶಿಥಿಲಾವಸ್ಥೆಯಲ್ಲಿರುವುದರಿಂದ ಒಂದೊಮ್ಮೆ ಯಾವುದಾದರೂ ವಾಹನ ಆಯ ತಪ್ಪಿ ಹಳ್ಳಕ್ಕೆ ಬಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.
ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸೇತುವೆ ದುರಸ್ತಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೇತುವೆ ದುರಸ್ತಿಗೆ ಕ್ರಮವಹಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಬೇಕೆಂಬುದು ಈ ಭಾಗದ ಸಾರ್ವಜನಿಕರ ಒಕ್ಕೊರಲಿನ ಒತ್ತಾಯವಾಗಿದೆ.
ಸಂಚಾರ ನಿಲ್ಲಿಸಿದ ಕರಾರಸಾಸಂ ಬಸ್: ಆದಿವಾಸಿ ಸೋಲಿಗರು ವಾಸಿಸುವ ಹಿರಿಯಂಬಲ, ಗುಂಡಿಮಾಳ, ಹೊಸಪೋಡು ಗ್ರಾಮಗಳಿಗೆ ಕರಾರಸಾಸಂ ನಿಂದ ದಿನನಿತ್ಯದ ಸಂಚಾರಕ್ಕೆ 2 ಬಸ್ ನಿಯೋಜಿಸಲಾಗಿತ್ತು. ಆದರೆ ಸೇತುವೆ ದುರಸ್ತಿಯಾಗಿರುವುದರಿಂದ ಮತ್ತು ರಸ್ತೆ ಕೆಸರು ಗದ್ದೆಯಂತಾಗಿರುವುದರಿಂದ ಒಂದು ಬಸ್ ಸಂಚಾರವನ್ನು ನಿಲ್ಲಿಸಿದೆ. ಇದೀಗ ಒಂದೇ ಒಂದು ಬಸ್ ಮಾತ್ರ ಓಡಾಡುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ದಿನಸಿ, ತರಕಾರಿ ಸಾಗಾಟ ಮಾಡಲು ಅಡಚಣೆಯಾಗಿದ್ದು ಶಿಕ್ಷಕರು ಪರಿತಪಿಸುವಂತಾಗಿದೆ.
ಸೇತುವೆ ದುರಸ್ತಿಯಲ್ಲಿದ್ದು ಸಂಚಾರಕ್ಕಾಗಿ ಪ್ರಯಾಸಪಡುವಂತಾಗಿದೆ. ಈ ರಸ್ತೆಯಲ್ಲಿ ಬ್ಯಾಂಕ್, ಆಸ್ಪತ್ರೆಗೆ ಸಾವಿರಾರೂ ಜನ ಓಡಾಡುತ್ತಾರೆ. ಅಲ್ಲದೆ ಹೆಚ್ಚಾಗಿ ಶಾಲಾ ಮಕ್ಕಳು ಓಡಾಡುತ್ತಿದ್ದು ಬಸ್‌ನ ಚಾಲಕ ಪ್ರಾಣಭಯದಿಂದಲೇ ಬಸ್ ಚಾಲನೆ ಮಾಡುವಂತಹ ಪರಿಸ್ಥಿತಿಯಿದೆ. ಮಂಡ್ಯ ಜಿಲ್ಲೆಯ ಕನಕನಮರಡಿಯಲ್ಲಿ ಸಂಭವಿಸಿದ್ದ ದುರಂತ ಮರುಕಳಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಹಾಗೂ ಮೊದಲು ಸೇತುವೆ ದುರಸ್ತಿಪಡಿಸಬೇಕು.
-ಕೃಷ್ಣ, ಪಿ.ಜಿ.ಪಾಳ್ಯ, ಗ್ರಾಪಂ ಸದಸ್ಯ
* ವಿನೋದ್ ಎನ್, ಗೌಡ