Advertisement

ನೆರೆಪೀಡಿತ ಪ್ರದೇಶಗಳ ಶಾಲಾ ಕಟ್ಟಡ ದುರಸ್ತಿ ಮಾಡಿ

10:59 PM Oct 09, 2019 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪ ಪರಿಹಾರ ಅನುದಾನವಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 500 ಕೋಟಿ ರೂ.ಹಾಗೂ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ಗಳ ಖಾತೆಯಲ್ಲಿರುವ 250 ಕೋಟಿ ರೂ.ಗಳನ್ನು ಬಳಸಿಕೊಂಡು ತುರ್ತಾಗಿ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ಬುಧವಾರ ನಿರ್ದೇಶನ ನೀಡಿದರು.

Advertisement

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರೊಂದಿಗೆ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫ ರೆನ್ಸ್‌ ನಡೆಸಿದ ಸಚಿವರು, ನೆರೆ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಶಾಲಾ ಕೊಠಡಿಗಳ ಮೂಲ ಸೌಕರ್ಯ ಕಾಮಗಾರಿಗಳನ್ನು ಕೂಡಲೇ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸೂಚಿಸಿದರು.

ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ವಿಕೋಪ ಪರಿಹಾರ ಅನು ದಾನವಾಗಿ ಒದಗಿಸಿದ್ದು, ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿಗೆ ಒದಗಿಸಿರುವ ಹಾಗೂ ಈಗಾಗಲೇ ಜಿಲ್ಲಾ ಪಂಚಾಯತ್‌ಗಳ ಖಾತೆಗಳಲ್ಲಿ ರುವ 250 ಕೋಟಿ ರೂ. ಅನುದಾನ ಸೇರಿಸಿಕೊಂಡು ಶಾಲಾ ಕೊಠಡಿಗಳ, ಅಂಗನವಾಡಿಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳ ಕಟ್ಟಡಗಳನ್ನು ಮಾತ್ರ ದುರಸ್ತಿಗೆ ಪರಿಗಣಿಸಬೇಕು. ಗೋಡೆ ದುರಸ್ತಿ, ಮೇಲ್ಛಾವಣಿ ದುರಸ್ತಿ, ಹೆಣ್ಣುಮಕ್ಕಳ ಶೌಚಾಲಯ ನಿರ್ಮಾಣಕ್ಕೂ ಪ್ರಾಮುಖ್ಯತೆ ನೀಡಬೇಕು. ತರಗತಿ ನಡೆಯುವಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಕಾಲಮಿತಿಯಲ್ಲಿ ತೆಗೆದುಕೊಳ್ಳಬೇಕು. ಸಂಪೂರ್ಣ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಕೂಡಲೇ ಒಡೆದು ಹಾಕಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರು ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ತಮ್ಮ ನಿಧಿಯಲ್ಲಿ ಅನುದಾನ ನೀಡಲು ಕೋರಿಕೊಳ್ಳಬೇಕು. ಸಂಘ, ಸಂಸ್ಥೆಗಳ ಸಿಎಸ್‌ಆರ್‌ ಅನುದಾನದಲ್ಲಿ ಹಣ ಪಡೆಯಲು ಸ್ಥಳೀಯ ಹಂತದಲ್ಲಿ ಪ್ರಯತ್ನಿಸಬೇಕು. ಪ್ರತಿ ವಾರದ ಆರ್ಥಿಕ ಹಾಗೂ ಭೌತಿಕ ಪ್ರಗತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಉಪನಿರ್ದೇಶಕರು ಕಡ್ಡಾಯವಾಗಿ ನೀಡಬೇಕು ಎಂದು ನಿರ್ದೇಶಿಸಿದರು.

Advertisement

ಜಿಲ್ಲಾ ಪ್ರವಾಸ: ಅಕ್ಟೋಬರ್‌ 22 ಮತ್ತು 23ರಂದು ಬೆಳಗಾವಿ, ವಿಜಯಪುರ ಹಾಗೂ ಚಿಕ್ಕೋಡಿ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಾಲೆಗಳ ವಸ್ತುಸ್ಥಿತಿಯ ಪರಿವೀಕ್ಷಣೆ ಮಾಡುವುದಾಗಿ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಪಬ್ಲಿಕ್‌ ಪರೀಕ್ಷೆ ಬಗ್ಗೆ ಮಾಹಿತಿ ನೀಡಿ: ಪ್ರಸಕ್ತ ಸಾಲಿನಿಂದಲೇ 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಶೀಘ್ರ ಆರಂಭಿಸಬೇಕು. ಪ್ರತಿ ವಾರಕ್ಕೆ ಕನಿಷ್ಠ ಐದು ಶಾಲೆಗಳಿಗೆ ಭೇಟಿ ನೀಡಿ, 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಯಾವ ರೀತಿ ನಡೆಯಲಿದೆ ಹಾಗೂ ಶಾಲೆ ಮತ್ತು ಮಕ್ಕಳು ಹೇಗೆ ಸಿದ್ಧ ರಾಗಬೇಕು ಎಂಬುದರ ಬಗ್ಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡಬೇಕೆಂದು ಸಚಿವರು ವಿಡಿಯೋ ಸಂವಾದದಲ್ಲಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next