ಮೈಸೂರು: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಜಗನ್ಮೋಹನ ಅರಮನೆಗೆ ಬೀಗ ಹಾಕಲಾಗಿದೆ. ಇದರಿಂದ
ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.
ಜಗನ್ಮೋಹನ ಅರಮನೆಗೆ ಹೊಂದಿಕೊಂಡಿರುವ ಆರ್ಟ್ ಗ್ಯಾಲರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಜಗನ್ಮೋಹನ ಅರಮನೆ ಹಾಗೂ ಆರ್ಟ್‌ಗ್ಯಾಲರಿ ಬಂದ್ ಮಾಡಲಾಗಿದ್ದು, ಈ ಬಗ್ಗೆ ಮುಖ್ಯ ದ್ವಾರದಲ್ಲಿ ಅರಮನೆ ದುರಸ್ತಿಯಲ್ಲಿದೆ ಎಂಬ ಫಲಕವನ್ನು ಹಾಕಲಾಗಿದೆ.ಆದ್ದರಿಂದ ಮುಂದಿನ 2 ತಿಂಗಳ ಕಾಲ ಅರಮನೆ ವೀಕ್ಷಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲದಂತಾಗಿದೆ. ಅಲ್ಲದೆ ದಸರಾ ಸಂದರ್ಭದಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳಿಗೂ ಜಗನ್ಮೋಹನ ಅರಮನೆ ದೊರೆಯುವ ಅವಕಾಶಗಳು ತೀರಾ ಕಡಿಮೆ.
ನಗರದ ಹೃದಯಭಾಗದಲ್ಲಿರುವ ಜಗನ್ಮೋಹನ ಅರಮನೆಯ ಒಂದು ಭಾಗದಲ್ಲಿ ವೇದಿಕೆ ಸಭಾಂಗಣ ಮತ್ತೂಂದು ಭಾಗದಲ್ಲಿ ಆರ್ಟ್ ಗ್ಯಾಲರಿಯಿದೆ. ಮೈಸೂರು ಅರಸರ ಆಳ್ವಿಕೆಯನ್ನು ನೆನಪಿಸುವ ಶಸ್ತ್ರಾಸ್ತ್ರಗಳು, ತೈಲ ವರ್ಣದ ಚಿತ್ರಗಳು ಸೇರಿ ರಾಜಮಹಾರಾಜರ ಅನೇಕ ಚಿತ್ರಗಳು ನೋಡುಗರನ್ನು ಸೆಳೆಯುವಂತಿದೆ.
ಹೀಗಾಗಿ ಮೈಸೂರಿಗೆ ಬರುವ ಪ್ರವಾಸಿಗರು ಜಗನ್ಮೋಹನ ಅರಮನೆ ವೀಕ್ಷಿಸದೆ ವಾಪಸ್ ಹೋಗುತ್ತಿರಲಿಲ್ಲ. ಇನ್ನು ಅರಮನೆ ವೇದಿಕೆಯಲ್ಲಿ ತಿಂಗಳ ಬಹುತೇಕ ದಿನಗಳಲ್ಲಿವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಇದೀಗ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲವು ದಿನಗಳವರೆಗೆ ಎಲ್ಲಾ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಇಲ್ಲದಂತಾಗಿದೆ. ಪ್ರವೇಶ ನಿರ್ಬಂಧ ಕಾರಣ ಇಲ್ಲಿನ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ. ಹೀಗಾಗಿ ಅರಮನೆ ದುರಸ್ತಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯ ವ್ಯಾಪಾರಿಗಳು, ಪ್ರವಾಸಿಗರ ಒತ್ತಾಯವಾಗಿದೆ.