Advertisement

ರೇಣುಕಾಚಾರ್ಯರ ಧರ್ಮ ಸೂತ್ರ ದಾರಿದೀಪ

10:28 AM Apr 27, 2022 | Team Udayavani |

ಚಿಂಚೋಳಿ: ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ “ದಶಪಥ’ ಧರ್ಮ ಸೂತ್ರಗಳು ಸಕಲರ ಬಾಳಿಗೆ ದಾರಿದೀಪವಾಗಿವಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

Advertisement

ಪಟ್ಟಣದಲ್ಲಿರುವ ಮಾಜಿ ಸಚಿವ ದಿ| ವೈಜನಾಥ ಪಾಟೀಲರ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದರೂ ಜೀವನದಲ್ಲಿ ಸುಖಶಾಂತಿಯಿಲ್ಲ. ಶಾಂತಿ-ನೆಮ್ಮದಿ ಬದುಕಿಗೆ ಧರ್ಮವೇ ಮೂಲ. ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥ ಮೀರಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದಾರೆ. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಪ್ರಥಮ ಕೀರ್ತಿ ರೇಣುಕರಿಗೆ ಸಲ್ಲುತ್ತದೆ ಎಂದರು.

ಪುರಷ-ಸ್ತ್ರೀ, ಬಡವ-ಬಲ್ಲಿದ, ಮೇಲು-ಕೀಳು ಎನ್ನದೇ ಸಕಲ ಸರ್ವಧರ್ಮಗಳ ಉನ್ನತಿಗೆ ರೇಣುಕರು ಶ್ರಮಿಸಿದ್ದರು. ಸಕಲರಲ್ಲೂ ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ಭಕ್ತರು ಜೀವನದಲ್ಲಿ ಶಿಸ್ತು, ಸಂಯಮ ಪರಿಪಾಲಿಸಬೇಕು. ಇದರಿಂದ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲಕುಮಾರ ಅವರ ದಿಟ್ಟ ನಿರ್ಧಾರದಿಂದ ಸರ್ಕಾರದ ವತಿಯಿಂದಲೇ ರೇಣುಕಾಚಾರ್ಯ ಜಯಂತಿ ಆಚರಿಸಲು ಘೋಷಣೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ರೇಣುಕಾಚಾರ್ಯರು ಒಂದೇ ಜಾತಿಗೆ ಸೀಮಿತರಾಗಿಲ್ಲ. ಎಲ್ಲ ವರ್ಗದ ಜನರಿಗೂ ಆದರ್ಶ, ಮೌಲ್ಯಗಳನ್ನು ಬೋಧಿಸಿದ್ದಾರೆ. ಜಗತ್ತನ್ನು ಕಲ್ಯಾಣ ಮಾಡಿದ್ದಾರೆ. ರಾಜಕೀಯದಲ್ಲಿ ಧರ್ಮವಿರಬೇಕು, ಧರ್ಮದಲ್ಲಿ ರಾಜಕೀಯ ಎಂದಿಗೂ ಇರಬಾರದು ಎಂದರು.

ದಿ| ವೀರೇಂದ್ರ ಪಾಟೀಲ ಎರಡು ಸಲ ಮುಖ್ಯಮಂತ್ರಿಯಾಗಿ ರಾಜ್ಯದ ದಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿ ಆಡಳಿತ ನಡೆಸಿದ್ದರು. ಅದರಂತೆ ಮಾಜಿ ಸಚಿವ ವೈಜನಾಥ ಪಾಟೀಲ ಆದರ್ಶ ರಾಜಕಾರಣಿಯಾಗಿದ್ದರು. ತಮ್ಮ ಮಠಕ್ಕೆ ಅನ್ಯೋನ್ಯವಾಗಿದ್ದರು ಎಂದು ಸ್ಮರಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಮಾತನಾಡಿ, ಸಮಗ್ರ ದೇಶವೇ ಶಿವಸ್ವರೂಪಿಯಾಗಿದೆ ಎಂದರು. ಕಲಬುರಗಿ ಸಂಸದ ಡಾ| ಉಮೇಶ ಜಾಧವ ಮಾತನಾಡಿ, ರೇಣುಕಾಚಾರ್ಯ ಜಯಂತಿ ಸರ್ಕಾರವೇ ಆಚರಿಸಲಿದ್ದು, ಎಲ್ಲರೂ ಅವರ ತತ್ವ-ಆದರ್ಶ ಪಾಲಿಸೋಣ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಮಾತನಾಡಿ, ರೇಣುಕಾಚಾರ್ಯರ ಜೀವನ ಮತ್ತು ಇತಿಹಾಸ ತಿಳಿಸಿದರು. ಶ್ರೀ ಶಿವಶಂಕರ ಶಿವಾಚಾರ್ಯರು ಸೇಡಂ, ಶ್ರೀ ಕರುಣೇಶ್ವರ ಶಿವಾಚಾರ್ಯರು ನಿಡಗುಂದಾ, ಶ್ರೀ ಅಭಿನವ ರಾಚೋಟೇಶ್ವರ ಚಂದನಕೇರಾ, ಶ್ರೀ ಚೆನ್ನ ರುದ್ರಮುನಿ ಶಿವಾಚಾರ್ಯರು ಸೂಗುರ, ಪಂಪಾಪತಿ ದೇವರು ಸುಲೇಪೇಟ, ಶಾಸಕ ಡಾ| ಅವಿನಾಶ ಜಾಧವ, ಕೆಪಿಸಿಸಿ(ಐ)ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಡಾ|ಶರಣಪ್ರಕಾಶ ಪಾಟೀಲ, ಗೌತಮ ಪಾಟೀಲ, ಅಜೀತ್‌ ಪಾಟೀಲ, ಶರಣು ಪಾಟೀಲ, ಜಗದೇವಿ ಗಡಂತಿ, ಸಂತೋಷ ಗಡಂತಿ, ನರಸಮ್ಮ ಆವಂಟಿ, ಸಂಗಯ್ಯ ಸ್ವಾಮಿ, ಬಸವರಾಜಮಲಿ, ಸುಭಾಷ ಸೀಳಿನ, ಚಿತ್ರಶೇಖರ ಪಾಟೀಲ, ಸಂಜೀವಕುಮಾರ ಪಾಟೀಲ,ನೀಲಕಂಠ ಸೀಳಿನ ಇನ್ನಿತರರಿದ್ದರು. ಚಂದನಕೇರಾದ ಶ್ರೀ ಅಭಿನವ ರಾಚೋಟೇಶ್ವರರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ್ಯುತ್ಸವ ಅಧ್ಯಕ್ಷೆ ಉಮಾಪಾಟೀಲ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next