ಯಾದಗಿರಿ: ಹಿಂದಿನ ಯುಗದ ಆಚಾರ- ವಿಚಾರಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಕಲಿಯುಗದಲ್ಲಿ ವಿಧ್ವಂಸಕ ಪ್ರವೃತ್ತಿ ಮುಂದುವರಿದಿದೆ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಯುಗಮಾನೋತ್ಸವ ಹಾಗೂ ಪಂ.ಲಿಂ| ಜಿ.ಎಂ. ಗುರುಸಿದ್ದ ಶಾಸ್ತ್ರಿಗಳ ಸ್ಮರಣೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ತಪ್ಪನ್ನು ಸಮರ್ಥನೆ ಮಾಡಿಕೊಂಡು ಅದೇ ಸತ್ಯ ಎಂದು ಪ್ರತಿಪಾದನೆ ಮಾಡುವ ಕಾಲವಿದ್ದು, ಪ್ರತಿಯೊಬ್ಬರೂ ಸರಿದಾರಿಯಲ್ಲಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಜಗದ್ಗುರು ರೇಣುಕಾಚಾರ್ಯರು 4 ಸಾವಿರ ವರ್ಷಗಳ ಹಿಂದೆಯೇ ಕಾಯಕ ದಾಸೋಹ, ಜಂಗಮ ಸೇವೆಗಳ ಮಠ-ಮಾನ್ಯ ಪರಂಪರೆ ಡಿಂಡಿಮಾರ್ಯರು ಅನುಸರಿಸುತ್ತಿದ್ದುದರ ಬಗ್ಗೆ ವೀರಾಗಮಗಳನ್ನು ಉಲ್ಲೇಖೀಸಿ ಹಿರಿಯ ಸಾಹಿತಿಗಳೂ ಶಿವಾಚಾರ್ಯರಾದ ಜಚನಿ ವಿವರಿಸಿದ್ದಾರೆ ಎಂದರು. ಪ್ರಾಚೀನ ಕಾಲದಲ್ಲಿಯೇ ಮಠಗಳನ್ನು ನಿರ್ಮಿಸಿ, ದಾಸೋಹ, ಅನುಭವ ಮಂಟಪ, ಧರ್ಮ ಸಂದೇಶ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರÂ ಹಾಗೂ ಅಸ್ಪೃಶ್ಯತೆ ನಿವಾರಣೆ ಸಂದೇಶ ಸಾರಿದ್ದಾರೆ ಎಂದರು.
ಮಾತಂಗ ಋಷಿ ಮತ್ತು ಬೆಂಬಲಿಗರಿಗೆ ರೇಣುಕಾಚಾರ್ಯರು ಸಂಸ್ಕಾರ ನೀಡಿ ಎಲ್ಲರನ್ನು ಮೇಲಕ್ಕೆತ್ತಿ ಉದ್ಧರಿಸಿದ ನಂತರ ಮಾದರ ಮಾತಂಗ ಮನಪರಿವರ್ತನೆಗೊಂಡು ಋಷಿಯಾಗಿ ಸಪ್ತ ಋಷಿಗಳಲ್ಲಿ ಸ್ಥಾನ ಪಡೆದುಕೊಂಡದ್ದು ರೇಣುಕಾಚಾರ್ಯರಿಂದ ಎಂದು ಸ್ಮರಿಸಿದರು. ದಾಸಬಾಳ ಮಠದ ಸದ್ಗುರು ವೀರೇಶ್ವರ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರ ಜಯಂತಿ ಕೇವಲ ಜಂಗಮ ಸಮಾಜದವರಷ್ಟೇ ಮಾಡಬೇಕೆಂಬ ಸಂಕುಚಿತತೆ ಬಿಟ್ಟು ಎಲ್ಲರೂ ಆಚರಣೆ ಮಾಡುವಂತಾಗಬೇಕು ಎಂದು ಹೇಳಿದರು.
ವೀರಶೈವ ಸಮಾಜ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಮಾತನಾಡಿ, ಲಿಂ. ಗುರುಸಿದ್ದ ಶಾಸ್ತ್ರಿಗಳು ವೀರಶೈವ ಕಲ್ಯಾಣ ಮಂಟಪ ಕಟ್ಟಲು ಕಾರಣೀಭೂತರಾಗಿದ್ದಾರೆ. ಅಂದಿನ ಸಮಯದಲ್ಲೇ ವೀರಶೈವ ಸಮಾಜ ಕಟ್ಟಿದ ಧೀಮಂತರಲ್ಲಿ ಒಬ್ಬರು ಎಂದು ಹೇಳಿದರು. ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಪ್ರಾಸ್ತಾವಿಕ ಮಾತನಾಡಿ, ಮಹಾಸಭೆ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಬರುವ ದಿನಗಳಲ್ಲಿ ಬಸವೇಶ್ವರರ ಮೂರ್ತಿ ಸ್ಥಾಪನೆ, ವಸತಿ ನಿಲಯಗಳು ಸೇರಿದಂತೆ ಸಮಾಜಮುಖೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಮಾಜಿ ಶಾಶಕ ಡಾ| ವೀರಬಸವಂತರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸೊಪ್ಪಿಮಠದ ಚನ್ನವೀರ ದೇವರು, ರಾಮಗಿರಿ ಹಿರೇಮಠದ ಬಸವರಾಜ ಶಾಸ್ತ್ರಿ, ಮಾಜಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಮಹೇಶರೆಡ್ಡಿ ಮುದ್ನಾಳ, ಶರಣಪ್ಪಗೌಡ ಮಲ್ಹಾರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಜಿಲ್ಲಾ ಯುವ ಅಧ್ಯಕ್ಷ ಅವಿನಾಶ ಜಗನ್ನಾಥ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ| ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು. ಮಹೇಶ ಹಿರೇಮಠ ಆಶನಾಳ ಸ್ವಾಗತಿಸಿದರು. ಶರಣು ಆಶನಾಳ ವಂದಿಸಿದರು.