ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬೆಳಣಿಗೆಗಳು ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತಷ್ಟು ಬಲ ಪಡೆಯುತ್ತಿದ್ದಂತೆ, ಸಿಎಂ ನಿವಾಸದ ಮುಂದೆ ಸ್ವಾಮೀಜಿಗಳ ದಂಡು ಸೇರುತ್ತಿದೆ. ಇದರ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದೆಹಲಿಗೆ ದೌಡಾಯಿಸಿದ್ದಾರೆ.
ಸಿಎಂ ಬಿಎಸ್ ವೈ ಪರ ಇರುವ ಕೆಲ ಆಪ್ತ ಶಾಸಕರೊಂದಿಗೆ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ ಎಂದು ವಾರಗಳ ಹಿಂದೆ ರೇಣುಕಾಚಾರ್ಯ ಹೇಳುತ್ತಿದ್ದರು. ಆದರೆ ಇದಕ್ಕೆ ಸಿಎಂ ಯಡಿಯೂರಪ್ಪ ಬೇಡ ಎಂದಿದ್ದರು ಎನ್ನಲಾಗಿದೆ. ಹೀಗಾಗಿ ಶಾಸಕರ ತಂಡದ ಜೊತೆಗೆ ದೆಹಲಿಗೆ ತೆರಳುವ ಯೋಜನೆಯನ್ನು ರೇಣುಕಾಚಾರ್ಯ ಕೈಬಿಟ್ಟಿದ್ದರು. ಆದರೆ ಇದೀಗ ಒಬ್ಬರೇ ದೆಹಲಿಗೆ ತೆರಳಿದ್ದಾರೆ.
ಆದರೆ ಬಿಎಸ್ ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಯುವುದು ಬಹುತೇಕ ಖಚಿತ ಎನ್ನುವಂತಹ ವಾತಾವರಣ ಇದೀಗ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ಎರಡು ವರ್ಷ ಬಿಎಸ್ ವೈ ಅವರನ್ನೇ ಮುಂದುವರಿಸುವಂತೆ ಕಮಲ ನಾಯಕರ ಬಳಿ ಕೇಳಿಕೊಂಡು ಕೊನೆಯ ಪ್ರಯತ್ನ ಮಾಡಲು ಹೊನ್ನಾಳಿ ಶಾಸಕ ದೆಹಲಿ ವಿಮಾನ ಏರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಆಮಿಷ, ಬೆದರಿಕೆ ಮತ್ತು ಸುಳ್ಳುಗಳೇ ಆಪರೇಷನ್ ಕಮಲ ಎಂಬ ಪಾತಕದ ಅಸ್ತ್ರಗಳು: ಸಿದ್ದರಾಮಯ್ಯ
ಮೊದಲು ರೇಣುಕಾಚಾರ್ಯ ದೆಹಲಿಗೆ ತೆರಳಿ ನಂತರ ಉಳಿದ ಶಾಸಕರು ವಿಮಾನ ಏರಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಬುಧವಾರ ಸಂಜೆ ಅಥವಾ ಗುರುವಾರ ಬೆಳಗ್ಗೆ ಇನ್ನಷ್ಟು ಶಾಸಕರು ದೆಹಲಿಗೆ ಹೋಗುವ ನಿರೀಕ್ಷೆಯಿದೆ.
ಆದರೆ ಭೇಟಿ ಮಾಡಲು ರೇಣುಕಾಚಾರ್ಯಗೆ ಯಾವುದೇ ನಾಯಕರ ಸಮಯ ಸಿಕ್ಕಿಲ್ಲ. ಮೊದಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ನಂತರ ಅವರ ಮುಖಾಂತರ ಜೆಪಿ ನಡ್ಡಾ, ಅಮಿತ್ ಶಾ ಭೇಟಿಗೆ ರೇಣುಕಾಚಾರ್ಯ ಪ್ರಯತ್ನ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಒಂದು ವೇಳೆ ಯಾವುದೇ ನಾಯಕರ ಭೇಟಿ ಅವಕಾಶ ಸಿಕ್ಕದೇ ಹೊದಲ್ಲಿ, ಶಾಸಕರ ತಂಡ ದೆಹಲಿ ವಿಮಾನ ಏರುವುದು ಅನುಮಾನವಾಗಿದೆ.