Advertisement

ಯಂತ್ರಗಳು ಬಾಡಿಗೆಗೆ ದೊರೆಯುತ್ತವೆ !

12:20 PM Oct 01, 2018 | |

ಕೃಷಿ ಯಂತ್ರಗಳು ಈ ಹಿಂದೆ ರೈತರ ಪಾಲಿಗೆ ಗಗನಕುಸುಮವಾಗಿದ್ದವು. ಏಕೆಂದರೆ, ದುಬಾರಿ ಬೆಲೆಯ ಯಂತ್ರಗಳನ್ನು ಕೊಳ್ಳಲು ಸಣ್ಣ ರೈತರಿಗೆ ಸಾಧ್ಯವೇ ಇರಲಿಲ್ಲ. ಇವನ್ನು ಬಾಡಿಗೆ ಪಡೆಯುವುದೂ ಕಷ್ಟವೇ. ಆದರೆ ಈಗ ಆರೀತಿ ಇಲ್ಲ.  ಕೃಷಿಕರು ಇದೀಗ ಹೊಸ ದಾರಿಯೊಂದನ್ನು ಕಂಡುಕೊಳ್ಳುವಂತಾಗಿದೆ. ಅದುವೇ ಕೃಷಿ ಯಂತ್ರ ಧಾರೆ. 

Advertisement

ಏನಿದು ಯೋಜನೆ? :
 ಈ ಯೋಜನೆಯಲ್ಲಿ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೈಗೆಟಕುವ ಬಾಡಿಗೆ ದರದಲ್ಲಿ ಅವರು ಬೆಳೆಯುವ ಕೃಷಿಗೆ ಪೂರಕವಾದ ಯಂತ್ರೋಪಕರಣಗಳನ್ನು ಸಕಾಲದಲ್ಲಿ ಒದಗಿಸಲಾಗುತ್ತದೆ. ಈಗಾಗಲೇ ರಾಜ್ಯದ 25 ಜಿಲ್ಲೆಗಳ 164 ಹೋಬಳಿಗಳಲ್ಲಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. 

  ಯಂತ್ರೋಪಕರಣಗಳನ್ನು ಖರೀದಿ ಮಾಡಲು ಶಕ್ತರಲ್ಲದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ, ಅವರ  ಕೈಗೆಟಕುವ ದರದಲ್ಲಿ ಯಂತ್ರಗಳನ್ನು ಬಾಡಿಗೆಗೆ ನೀಡುವುದು, ಆ  ಮೂಲಕ ರೈತರನ್ನು ಕೃಷಿಯಲ್ಲಿ ಇನ್ನಷ್ಟು ತೊಡಗುವಂತೆ ಮಾಡುವುದು, ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ ದೊರಕಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದು ಕರ್ನಾಟಕ ಸರಕಾರದ ಬಹು ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜಾವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ವಹಿಸಿಕೊಡಲಾಗಿದೆ.

ಅನುಷ್ಠಾನ ಹೇಗೆ? :
 ‘ಕೃಷಿ ಯಂತ್ರಧಾರೆ’ ಎಂದು ಈ ಯೋಜನೆಗೆ ನಾಮಕರಣ ಮಾಡಲಾಗಿದೆ. ಕೃಷಿ ಇಲಾಖೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರಿಕೆಯೊಂದಿಗೆ ನಡೆಯುತ್ತಿರುವ ಯೋಜನೆ ಇದು.  2014 ರಿಂದ 2020ರವರೆಗೆ, ಅಂದರೆ ಒಟ್ಟು ಆರು ವರ್ಷಗಳವರೆಗೆ ಈ ಯೋಜನೆಯನ್ನು ಮುನ್ನಡೆಸುವ, ಕೃಷಿಕರಿಗೆ ತಲುಪಿಸುವ ಜವಾಬ್ದಾರಿ ಗ್ರಾಮಾಭಿವೃದ್ಧಿ ಯೋಜನೆಯದ್ದು. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಸರಕಾರವು ಜಿಲ್ಲಾ ಚಾಲನಾ ಸಮಿತಿಯನ್ನು ರಚನೆ ಮಾಡಿರುತ್ತದೆ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಯಂತ್ರಗಳ ಬಾಡಿಗೆ ದರವನ್ನು ಮಾರುಕಟ್ಟೆ ದರಕ್ಕಿಂತ ಶೇ.20ರಿಂದ 50ರಷ್ಟು ಕಡಿಮೆಗೊಳಿಸಿದೆ. 

ಬಾಡಿಗೆಗೆ ಪಡೆಯುವುದು ಹೇಗೆ? :
ಇದಕ್ಕೆ ನಿಮ್ಮೂರಿನ ಬಾಡಿಗೆ ಕೇಂದ್ರಕ್ಕೆ ಹೋಗಿ  ಮುಂಗಡ ಹಣ ಪಾವತಿಸಿ ಬೇಕಾದ ಯಂತ್ರ ವನ್ನುಕಾಯ್ದಿರಿಸಬಹುದು. ಕೆಲವೊಮ್ಮೆ, ಏಕಕಾಲದಲ್ಲಿ ಎಲ್ಲಾ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು, ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾದಿರಿಸಿದರೆ ಒಳ್ಳೆಯದು. ಯಂತ್ರೋಪಕರಣಗಳ ಬಾಡಿಗೆಯ ವಿವರ ಮತ್ತು ಅಲ್ಲಿ ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲಾ ಯಂತ್ರೋಪಕರಣಗಳ ಬಾಡಿಗೆ ಕೇಂದ್ರದಲ್ಲಿ ತೂಗುಹಾಕಲಾಗಿರುತ್ತದೆ. 

Advertisement

ನೋಂದಣಿ ಮಾಡಿಸಿ 
 ರೈತರಿಗೆ ಗುಣಮಟ್ಟದ ಸೇವೆ ನೀಡಲು ಹಾಗೂ ಸುಲಭವಾಗಿ ಗುರುತಿಸಲು ಅವರಿಗಿರುವ ಭೂಮಿ, ಬೆಳೆಯುವ ಬೆಳೆಗಳು, ಗ್ರಾಮ, ಫೋನ್‌ ನಂಬರ್‌, ಪಂಚಾಯಿತಿ, ಬೇರೆ ಬೇರೆ ಕಾಲದಲ್ಲಿ ಬೆಳೆಯುವ ಬೆಳೆಗಳ ವಿವರ, ಪಹಣಿ ಪತ್ರದ ಜೆರಾಕ್ಸ್‌- ಹೀಗೆ ಎಲ್ಲವನ್ನು ಕೊಟ್ಟು ನೋಂದಣಿ ಮಾಡಿಸಿ. ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಟ್ಟು ಅವರಿಗೆ ಪ್ರತ್ಯೇಕ ಗುರುತು ಸಂಖ್ಯೆಯನ್ನು ನೀಡುತ್ತಾರೆ. ಇದುವರೆಗೆ ರಾಜ್ಯದಾದ್ಯಂತ 7,24,210 ಮಂದಿ ರೈತರನ್ನು ನೋಂದಾಯಿಸಿದ್ದಾರೆ.

ಯಂತ್ರೋಪಕರಣಗಳನ್ನು ಉಪಯೋಗಿಸುವುದು ಹೇಗೆ? :
ಬಾಡಿಗೆ ಕೇಂದ್ರದಿಂದ ಯಂತ್ರಗಳನ್ನು ಕಳುಹಿಸಿಕೊಡುವಾಗ ಜೊತೆಗೆ ನುರಿತ ಚಾಲಕರನ್ನೂ ಕಳುಹಿಸಿ ಕೊಡಲಾಗುತ್ತದೆ. ಯಂತ್ರ ನಿಮ್ಮ ಗದ್ದೆಗೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಾಚಾರವನ್ನು ಆ ಯಂತ್ರವನ್ನು ಚಲಿಸುವವರೇ ನೋಡಿಕೊಳ್ಳುತ್ತಾರೆ. ಚಾಲಕನಿಗೆ ಹಣ ನೀಡಬೇಕಾದ ಅಗತ್ಯವಿಲ್ಲ. ಕೆಲವೊಂದು ಚಾಲಕ ರಹಿತ ಯಂತ್ರಗಳು ಅಂದರೆ ನಾವೇ ಬಳಸಬಹುದಾದ ಡೀಸೆಲ್‌ ಪಂಪು, ಗರಗಸ, ಸ್ಪ್ರೆàಯರ್‌ ಮುಂತಾದ ಯಂತ್ರೋಪಕರಣಗಳನ್ನು ಬಳಕೆ ಮಾಡಿದ ನಂತರ ಕೇಂದ್ರಕ್ಕೆ ಹಿಂದಿರುಗಿಸುವ ಜವಾಬ್ದಾರಿ ರೈತರದ್ದು. 

ಯಂತ್ರಗಳನ್ನು ನೋಂದಾಯಿಸಿದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ದುರುಪಯೋಗಪಡಿಸಿದ್ದಲ್ಲಿ ಸಮಿತಿಯ ನಿರ್ಧಾರದಂತೆ ರೈತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು, ತಕರಾರು/ಸರಕಾರಿ ಸ್ಥಳದಲ್ಲಿ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ಯಂತ್ರಕ್ಕೆ ಹಾನಿಯಾದಲ್ಲಿ ಅದಕ್ಕೆಲ್ಲಾ ಬಾಡಿಗೆ ಪಡೆದುಕೊಂಡ ರೈತರೇ ಸಂಪೂರ್ಣ ಜವಾಬ್ದಾರರು. ಹೆಚ್ಚಿನ ಮಾಹಿತಿಗಾಗಿ ನಿಮ್ಮೂರಿನ ಗ್ರಾಮಾಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಿ.

ಚಂದ್ರಹಾಸ ಚಾರ್ಮಾಡಿ                                                                  

Advertisement

Udayavani is now on Telegram. Click here to join our channel and stay updated with the latest news.

Next