Advertisement

ಶಾಲೆ ಆರಂಭಿಸದಿದ್ದರೆ ಸಮಾರಂಭಕ್ಕೆ ಬಾಡಿಗೆ!

02:39 PM Dec 17, 2020 | Adarsha |

ಕೊಪ್ಪಳ: ಕೋವಿಡ್‌-19 ಉಲ್ಬಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳನ್ನು ಬಂದ್‌ ಮಾಡಿ ಬರೋಬ್ಬರಿ 8 ತಿಂಗಳು ಗತಿಸಿವೆ. ಸರ್ಕಾರಿ ಶಾಲೆಗಳ ರೋದನೆ ಒಂದಡೆಯಾದರೆ, ಖಾಸಗಿ ಶಾಲೆಗಳ ಸಮಸ್ಯೆ ಮತ್ತೂಂದು ಕಡೆಯಾಗಿದೆ. ಖಾಸಗಿ ಶಾಲೆ ಮಾಲೀಕನೋರ್ವ ಶಾಲೆ ಆರಂಭಿಸದಿದ್ದರೆ ನಾವು ಶಿಕ್ಷಕರ ವೇತನ ಭರಿಸಲು ಮದುವೆ ಕಾರ್ಯಗಳಿಗ  ಶಾಲೆ ಬಾಡಿಗೆಯನ್ನಾದರೂ ಕೊಡುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

ಸರ್ಕಾರ ಕೋವಿಡ್‌ ನಿಯಂತ್ರಣದ ಬಳಿಕ ಎಲ್ಲ ಉದ್ಯಮವನ್ನೂ ಆರಂಭಿಸಿದೆ. ಕಾಲೇಜು ಆರಂಭಿಸಿ ವಿದ್ಯಾರ್ಥಿಗಳ ಹಿತ ಕಾಯಲು ಮುಂದಾಗಿದೆ. ಆದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭಿಸಲು ಮನಸ್ಸು ಮಾಡುತ್ತಿಲ್ಲ.

ಯಾವುದೇ ನಿರ್ಧಾರ ಸ್ಪಷ್ಟವಾಗದೇ ಇರುವುದು ಪಾಲಕರಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಯಾರದೋ ತಪ್ಪು ಕಲ್ಪನೆಯಿಂದಾಗಿ ವಿದ್ಯಾಗಮ, ವಠಾರ ಶಾಲೆ ಆರಂಭಿಸಿ ಕೊನೆಯ ಹಂತಕ್ಕೆ ಕೈ ಬಿಟ್ಟಿದೆ. ಹೀಗೆ ಆದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಈ ಹಿಂದಿನ ತರಗತಿಯಲ್ಲಿ ಅಭ್ಯಾಸ ಮಾಡಿದ ಪಠ್ಯವನ್ನೇ ಮರೆಯುತ್ತಿದ್ದಾರೆ.

ಕೆಲ ಪಾಲಕರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸುತ್ತಿದ್ದಾರೆ. ಇದರಿಂದ ಮಗು ಕಲಿಕೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ಸರ್ಕಾರಿ ಶಾಲೆ ಆರಂಭಿಸಿದೆ. ಆದರೆ ಮಕ್ಕಳ ಹಾಜರಾತಿಗೆ ಕೊಕ್ಕೆ ಹಾಕಿದೆ. ಪ್ರತಿದಿನ ಸರ್ಕಾರಿ ಶಾಲೆ ಶಿಕ್ಷಕರು ಶಾಲೆಗೆ ಹಾಜರಾಗಿ ಸುಮ್ಮನೆ ಕುಳಿತು ಸಂಜೆ ಮನೆಗೆ ತೆರಳುತ್ತಿದ್ದಾರೆ. ಅವರಿಗೆ ಬೋಧನೆ ಮಾಡಲು ಮಕ್ಕಳಿಲ್ಲ. ಮಕ್ಕಳು ಶಿಕ್ಷಣ ಪಡೆಯಲು ಸರ್ಕಾರ ಅನುಮತಿ ನೀಡಿಲ್ಲ.

ಇನ್ನು ಖಾಸಗಿ ಶಾಲೆಗಳ ಸ್ಥಿತಿಯೂ ಇದೇ ಆಗಿದೆ. ಸರ್ಕಾರ ಶಾಲೆಗಳನ್ನು ಆರಂಭಿಸಲಿ. ಇಲ್ಲವೇ ಶೂನ್ಯ ವರ್ಷವೆಂದು ಘೋಷಿಸಿ ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಿ. ಈ ಕುರಿತಂತೆ ಮನವಿ ಸಲ್ಲಿಸಿ, ಪ್ರತಿಭಟನೆಯನ್ನೂ ಮಾಡಲಾಗಿದೆ. ಆದರೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ. ಇತ್ತ ಶೂನ್ಯ ವರ್ಷವೆಂದೂ ಘೋಷಿಸುತ್ತಿಲ್ಲ.

Advertisement

ಇದನ್ನೂ ಓದಿ:ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಫೈರಿಂಗ್ ಪ್ರಕರಣ: ಸಮಸ್ಯೆ ಬಗೆಹರಿಸಲಾಗುವುದು ಎಂದ ಡಿಕೆಶಿ

ಅತ್ತ ಶಾಲೆ ಆರಂಭಿಸುತ್ತೇವೆ ಎನ್ನುವ ಸ್ಪಷ್ಟ ಸಂದೇಶವನ್ನೂ ನೀಡುತ್ತಿಲ್ಲ. ಅಡ್ಡಗೋಡೆ ಮೇಲೆ ದೀಪವನ್ನಿಟ್ಟಂತೆ ಈ ತಿಂಗಳು, ಮುಂದಿನ ತಿಂಗಳು ಶಾಲೆ ಆರಂಭಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳುತ್ತಲೇ ಇದ್ದಾರೆ. ಆನ್‌ ಲೈನ್‌ ತರಗತಿಗಳು ಮಕ್ಕಳಿಗೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ಸ್ವತಃ ಪಾಲಕ ವರ್ಗವೇ ಆಪಾದನೆ ಮಾಡುವಂತಾಗಿದೆ.

ಇನ್ನು ಕೊಪ್ಪಳದಲ್ಲಿ ಖಾಸಗಿ ಶಾಲೆ ಮಾಲೀಕ ಶಿವಕುಮಾರ ಎನ್ನುವವರು ಶಿಕ್ಷಣ ಸಚಿವ ಸುರೇಶಕುಮಾರ ಅವರ ನಡೆಯ ವಿರುದ್ಧ ಹರಿಹಾಯ್ದು ಶಾಲೆಗಳನ್ನು ಆರಂಭಿಸಿ, ಇಲ್ಲದಿದ್ದರೆ ನಾವು ಶಾಲೆಗಳನ್ನು ಮದುವೆ ಕಾರ್ಯಕ್ರಮಕ್ಕೆ ಬಾಡಿಗೆಯನ್ನಾದರೂ ಕೊಡುತ್ತೇವೆ. ಬಾಡಿಗೆ ಹಣದಲ್ಲಾದರೂ ನಮ್ಮ ಶಿಕ್ಷಕರಿಗೆ ವೇತನ ನೀಡಿ ಅವರ ಜೀವನ ನಡೆಸಲು ನೆರವಾಗುತ್ತೇವೆ. ಸರ್ಕಾರ ದೃಢ ನಿರ್ಧಾರ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದು ತರವಲ್ಲ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಶಾಲೆಗಳನ್ನು ಆರಂಭಿಸಲು ಮೀನಮೇಷ ಎಣಿಸುತ್ತಿದೆ. ಶಾಲೆ ಆರಂಭಿಸದಿದ್ದರೆ ಶೂನ್ಯ ವರ್ಷವೆಂದು ಘೋಷಣೆ ಮಾಡಲಿ. ಇಲ್ಲವೇ ಶಾಲೆ ಆರಂಭಿಸಿ, ಒಂದು ನೀತಿಯನ್ನು ರೂಪಿಸಲಿ. ಗೊಂದಲದ ಹೇಳಿಕೆ ನೀಡಿದ್ರೆ ನಮಗೂ ಕಷ್ಟವಾಗಲಿದೆ. ಶಾಲೆ ಆರಂಭಿಸದಿದ್ದರೆ ನಾವು ನಮ್ಮ ಶಾಲಾ ಕಟ್ಟಡಗಳನ್ನು ಮದುವೆ, ಮುಂಜಿ ಕಾರ್ಯಕ್ಕಾದರೂ ಬಾಡಿಗೆ ಕೊಡುತ್ತೇವೆ. ಅದರಿಂದ ಬರುವ ಬಾಡಿಗೆ ಹಣದಲ್ಲಾದರೂ ಶಿಕ್ಷಕರ ವೇತನ ಕೊಡುತ್ತೇವೆ.

ಶಿವಕುಮಾರ ಕುಕನೂರು, ಖಾಸಗಿ ಶಾಲೆ ಮಾಲೀಕ ಕೊಪ್ಪಳ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next