ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ವಿಜ್ಞಾನ ರಂಗ ತನ್ನ ಹೆಮ್ಮೆಯ ಪುತ್ರ, ಕರ್ನಾಟಕದ ಉಡುಪಿಯ ಪ್ರೊ. ಯು ಆರ್ ರಾವ್ ಅವರನ್ನು ಕಳೆದು ಕೊಂಡ ದಿನವಾದ ನಿನ್ನೆ ಸೋಮವಾರವೇ ಮತ್ತೋರ್ವ ಪ್ರಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊಫೆಸರ್ ಯಶ್ ಪಾಲ್ ಅವರನ್ನು ಕಳೆದುಕೊಂಡು ಮತ್ತಷ್ಟು ಬಡವಾಗಿದೆ.
ಪ್ರೊಫೆಸರ್ ಯಶ್ ಪಾಲ್ ಅವರು ಜು.24, 2017ರ ಸೋಮವಾರ ನೋಯ್ಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಯಶ್‌ಪಾಲ್ ಅವರ ಸಾವಿನ ನಿಖರ ಕಾರಣ ಏನೆಂದು ಗೊತ್ತಾಗಿಲ್ಲ; ಆದರೆ ಅವರು ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಪ್ರೊ. ಪಾಲ್ ಅವರು ಸೂರ್ಯ ಕಿರಣಗಳ ಅಧ್ಯಯನಕ್ಕೆ ಹೆಸರಾದವರು ಮತ್ತು ಮಹತ್ವದ ಕಾಣಿಕೆ ನೀಡಿದವರು. ಮಾತ್ರವಲ್ಲ ಶೈಕ್ಷಣಿಕ ಸಂಸ್ಥೆಯ ನಿರ್ಮಾತೃರಾಗಿಯೂ ಅವರು ಪ್ರಸಿದ್ಧರಾಗಿರುವರು.
ಪ್ರೊಫೆಸರ್ ಯಶ್ ಪಾಲ್ ಅವರಿಗೆ 2013ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಸಂದಿದೆ. ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ಅವರು ದೇಶದ ವಿಜ್ಞಾನ ಸಂವಹನಕಾರರಾಗಿ ಖ್ಯಾತರಾದರು. 1976ರಷ್ಟು ಹಿಂದೆಯೇ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು. ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಅವರು ನೀಡಿದ್ದ ಕಾಣಿಕೆಗೆ ಈ ಪುರಸ್ಕಾರ ಸಂದಿತ್ತು.
ಪ್ರೊ. ಯಶ್ ಪಾಲ್ ಹುಟ್ಟಿದ್ದು 1926ರ ನವೆಂಬರ್ 26ರಂದು – ಈಗ ಪಾಕಿಸ್ಥಾನಕ್ಕೆ ಸೇರಿಹೋಗಿರುವ ಬ್ರಿಟಿಷ್ ಭಾರತದ ಝಾಂಗ್‌ನಲ್ಲಿ. ಯಶ್ ಪಾಲ್ ಅವರು ಮಸ್ಯಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ನಲ್ಲಿ ಅವರು ತಮ್ಮ ವೃತ್ತಿ ಬದುಕು ಆರಂಭಿಸಿದ್ದರು.
ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾಲಯದ ಚಾನ್ಸಲರ್ ಆಗಿಯೂ ಪ್ರೊ.ಯಶ್ ಪಾಲ್ ಅವರು 2007ರ ಮಾರ್ಚ್‌ನಿಂದ 2012ರ ಮಾರ್ಚ್ ವರೆಗೆ ಸೇವೆ ಸಲ್ಲಿಸಿದ್ದರು.