Advertisement

ರೆಂಜಿಲಾಡಿಯ ಯೋಧ ಲಿಜೇಶ್‌ ಕುರಿಯನ್‌ ಹೃದಯಾಘಾತದಿಂದ ನಿಧನ

10:06 PM Mar 28, 2023 | Team Udayavani |

ಸುಬ್ರಹ್ಮಣ್ಯ: ಹೃದಯಾಘಾತದಿಂದ ಕೊಯಮತ್ತೂರಿನಲ್ಲಿ ನಿಧನ ಹೊಂದಿದ ಕಡಬ ತಾಲೂಕಿನ ರೆಂಜಿಲಾಡಿಯ ಯೋಧನಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ಅಂತಿಮ ಗೌರವ ಸಲ್ಲಿಸಿ ಅಂತಿಮ ಕಾರ್ಯ ನೆರವೇರಿಸಲಾಯಿತು.

Advertisement

ರೆಂಜಿಲಾಡಿ ಗ್ರಾಮದ ತರಪ್ಪೇಳ್‌ ನಿವಾಸಿ ಮಾಜಿ ಯೋಧ ಜೋನಿ ಟಿ.ಕೆ. ಅವರ ಪುತ್ರ ಚೆನ್ನೈ ರಿಜಿಮೆಂಟ್‌ನ ಕೋಲ್ಕತಾ ಘಟಕದಲ್ಲಿ ಯೋಧರಾಗಿದ್ದ ಲಿಜೇಶ್‌ ಕುರಿಯನ್‌ (30) ಮಾ. 26ರಂದು ಕೊಯಮತ್ತೂರುನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಂದೆ, ತಾಯಿ, ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ.
ಮಂಗಳವಾರ ಮೃತದೇಹವನ್ನು ಆ್ಯಂಬುಲೆನ್ಸ್‌ ಮೂಲಕ ತರಪ್ಪೇಳ್‌ ಮನೆಗೆ ತಂದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಿ, ಬಳಿಕ ಕುಟ್ರಾಪಾಡಿಯ ಸೈಂಟ್‌ ಮೇರೀಸ್‌ ಕ್ಯಾಥೋಲಿಕ್‌ ಫೊರೆನಾ ಚರ್ಚ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರು ಅಂತಿಮ ದರುಶನ ಪಡೆದರು.

19 ಕರ್ನಾಟಕ ಬೆಟಾಲಿಯನ್‌ ಎನ್‌.ಸಿ.ಸಿ. ಸಿ.ಎಚ್‌.ಎಂ. ಚೇತನ್‌ ಗೌಡ, ಹವಾಲ್ದಾರ್‌ ಸಮದೀಪ್‌, ಹವಾಲ್ದಾರ್‌ ದಿಲ್ದಾರ್‌ ಸಿಂಗ್‌, ಹವಾಲ್ದಾರ್‌ ವಿಪಿನ್‌ ಕುಮಾರ್‌, ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆಪಿಎಂ ಚೆರಿಯನ್‌, ತಹಶೀಲ್ದಾರ್‌ ರಮೇಶ್‌ ಬಾಬು, ಪಿಎಸ್‌ಐ ಶಶಿಧರ ಮುಂತಾದವರು ಗೌರವ ಸಲ್ಲಿಸಿದರು. ವಂ.ರೆ. ಜೋಸ್‌ ಅಯಂಕುಡಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಲಿಜೇಶ್‌ ಕಳೆದ 12 ವರ್ಷಗಳಿಂದ ಯೋಧರಾಗಿದ್ದು ಮಾರ್ಚ್‌ 30ರಂದು ತನ್ನ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next