ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಅಡಿಯಲ್ಲಿ ನಡೆದು ಬಂದಿರುವ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿ ಜೊಲ್ಲೆ ಶಿಕ್ಷಣ ಸಂಸ್ಥೆ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸಭಾ ಭವನದಲ್ಲಿ ಶನಿವಾರ ನಡೆದ ಜೊಲ್ಲೆ ಉದ್ಯೋಗ ಸಮೂಹದ ನಿರ್ದೇಶಕರು ಹಾಗೂ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.
1991ರಲ್ಲಿ ಯಕ್ಸಂಬಾದಂತಹ ಪುಟ್ಟ ಗ್ರಾಮದಲ್ಲಿ ಜನ್ಮ ತಾಳಿದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಇಂದು ಕರ್ನಾಟಕ, ಮಹಾರಾಷ್ಟ್ರದಲ್ಲಿ 153 ಶಾಖೆಗಳನ್ನು ಹೊಂದಿದೆ. ಹಿತೈಶಿಗಳು, ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳ ಒತ್ತಾಯದ ಮೇರೆಗೆ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಗಳನ್ನು ಬೇರ್ಪಡಿಸಿ ಜೊಲ್ಲೆ ಶಿಕ್ಷಣ ಸಂಸ್ಥೆ ಎಂದು ಮರು ನಾಮಕರಣ ಮಾಡಿ, ಲೋಗೊ ಬಿಡುಗಡೆ ಮಾಡಲಾಗಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ವರ್ಷದಲ್ಲಿ 15.26 ಕೋಟಿ ನಿವ್ವಳ ಲಾಭ ಗಳಿಸಿದ್ದು, ಲಾಕಡೌನ್ ಹಿನ್ನೆಲೆಯಲ್ಲಿ ವಸೂಲಿ ಆಗದೇ ಲಾಭಾಂಶ ಕಡಿಮೆ ಬಂದಿದೆ ಎಂದರು.
ಸಂಸ್ಥೆಯ ಚೇರಮನ್ ಜಯಾನಂದ ಜಾಧವ, ಬಸವಪ್ರಸಾದ ಜೊಲ್ಲೆ. ಅಪ್ಪಾಸಾಹೇಬ ಜೊಲ್ಲೆ. ಸಿದ್ರಾಮ ಗಡದೆ, ಜ್ಯೋತಿಪ್ರಸಾದ ಜೊಲ್ಲೆ ಮುಂತಾದವರು ಇದ್ದರು.