ಅಯೋಧ್ಯಾ : ಆಗ್ರಾದಲ್ಲಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಮೊಗಲ್ ಸ್ಮಾರಕ ತಾಜ್ ಮಹಲ್‌ಗೆ “ತಾಜ್ ಮಂದಿರ್’ ಎಂದು ಪುನರ್ ನಾಮಕರಣ ಮಾಡುವಂತೆ ಬಿಜೆಪಿ ನಾಯಕ ವಿನಯ್ ಕಟಿಯಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
“ತಾಜ್ ಮಹಲ್‌ಗೆ ತಾಜ್ ಮಂದಿರ್ ಎಂದು ಪುನರ್ ನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ; ಏಕೆಂದರೆ ತಾಜ್ ಮಹಲ್ ಹಿಂದೆ ಶಿವಾಲಯವಾಗಿತ್ತು’ ಎಂದು ಕಟಿಯಾರ್ ಹೇಳಿದ್ದಾರೆ.
ತಾಜ್ ಮಹಲ್ ಆವರಣದಲ್ಲಿ ನಿನ್ನೆ ಸೋಮವಾರ ಹಿಂದೂ ಯುವ ವಾಹಿನಿ ಸಂಘಟನೆಗೆ ಸೇರಿದ ಕಾರ್ಯಕರ್ತರ ಒಂದು ಸಮೂಹ ಶಿವ ಚಾಳೀಸಾ ಪಠಿಸಿ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕಟಿಯಾರ್ ಅವರು ತಾಜ್ ಮಹಲ್ ಪುನರ್ ನಾಮಕರಣಕ್ಕೆ ಒತ್ತಾಯಿಸಿದ್ದಾರೆ.
ವಾರದ ಹಿಂದೆ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು, “ಐತಿಹಾಸಿಕ ಸ್ಮಾರಕ ತಾಜ್ ಮಹಲ್ ದ್ರೋಹಿಗಳ ನಿರ್ಮಿತಿ; ಅದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿನ ಒಂದು ಕಪ್ಪು ಚುಕ್ಕೆ’ ಎಂದು ಹೇಳಿದ್ದರು.
ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಯಾರು, ಯಾಕಾಗಿ ಕಟ್ಟಿದರು ಎಂಬುದು ಮುಖ್ಯವಲ್ಲ; ಅದು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನ ಫಲವಾಗಿದೆ’ ಎಂದು ಹೇಳಿದ್ದರು.
ಇಷ್ಟಕ್ಕೂ ತಾಜ್ ಮಹಲ್ ಕುರಿತ ವಿವಾದ ಆರಂಭವಾದದ್ದು ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆ ತನ್ನ ಕೈಪಿಡಿಯಲ್ಲಿ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಉಲ್ಲೇಖೀಸದೆ ಕೈಬಿಟ್ಟ ಕಾರಣಕ್ಕೆ !