ಮಳೆಗಾಲವೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಮಳೆ ಬರುವಾಗ ಬೆಚ್ಚಗೆ ಮನೆಯಲ್ಲಿ ಕೂರುವ ಒಂದು ಬಗೆಯ ಖುಷಿಯೇ ಬೇರೆ. ಅದರೊಡನೆ ಕರಿದ ತಿಂಡಿ ತಿನ್ನಲು ಇನ್ನೂ ಒಂದು ರೀತಿಯ ಮಜಾ. ಒಲೆಯ ಮುಂದೆ ಕುಳಿತು ಕರಿದ ಹಪ್ಪಳವನ್ನು ತಿನ್ನುತ್ತಾ ಚಳಿಯನ್ನು ಕಾಯಿಸುತ್ತಾ ಕುಳಿತರೆ ಸಮಯ ಜಾರುವುದೇ ತಿಳಿಯುತ್ತಿರಲಿಲ್ಲ.
ಇನ್ನೇನು ಮಳೆಗಾಲ ಶುರುವಾಗಲು ತಿಂಗಳುಗಳು ಇದೆ ಎನ್ನುವಾಗಲೇ ಬೇಸಗೆಯಲ್ಲೆ ಎಲ್ಲೆಡೆಯಿಂದ ಹಲಸಿನಕಾಯಿಯನ್ನು ತಂದು ಹಪ್ಪಳ, ಸಂಡಿಗೆ, ಚಕ್ಕುಲಿಯನ್ನು ಮಾಡಲು ಸಿದ್ಧತೆಯನ್ನು ಮಾಡಿ ಬೇರೆ ಎಲ್ಲ ಕೆಲಸಗಳಿಗೆ ಬಿಡುವು ಕೊಟ್ಟು ಇದರ ತಯಾರಿಗೆ ಅತೀ ಶ್ರದ್ಧೆಯಿಂದ ಮಾಡಲು ಮನೆಯವರೆಲ್ಲ ಒಟ್ಟಾಗಿ ಸೇರಿ ಶುರು ಮಾಡುತ್ತೇವೆ. ಅದರೊಡನೆ ಮನೆಯಲ್ಲಿ ಮಕ್ಕಳು ಬೇಸಗೆ ರಜೆಯಲ್ಲಿರುವ ಹಾಗೆ ತಾವು ಕೈಜೋಡಿಸುತ್ತೇವೆ ಎಂದು ಬಂದು ಹಿರಿಯರಿಗೆ ಕೆಲಸವನ್ನು ದುಪಟ್ಟು ಮಾಡುವುದಂತೂ ನಿಜ.
ಹಾಗೆ ಕೈಜೋಡಿಸುತ್ತೇವೆ ಎಂದು ಬಂದು ಹಪ್ಪಳವನ್ನು ವಿಚಿತ್ರ ಆಕಾರಕ್ಕೆ ತಂದಿಟ್ಟುಬಿಡುತ್ತಿದ್ದರು. ತಾವೇ ಮಾಡಿದ ವಿಚಿತ್ರ ಆಕಾರದ ಹಪ್ಪಳವನ್ನು ಒಣಗಿಸುವಾಗ ಮಕ್ಕಳೆಲ್ಲ ತಮ್ಮ ತಮ್ಮಲ್ಲಿ ಬಿಗಿ ಕೊಳ್ಳುತ್ತಿದ್ದರು. ಒಂದಷ್ಟು ತಮಾಷೆ, ನಗು, ಬೈಗುಳದೊಡನೆ ಹಪ್ಪಳ ಸಂಡಿಗೆ ಆಗಿದ್ದೆ ತಿಳಿಯುತ್ತಿರಲಿಲ್ಲ. ಈ ದಿನವಂತು ಎಲ್ಲರಿಗೆ ಒಂದು ರೀತಿಯ ಹಬ್ಬದ ವಾತಾವರಣ ಇದ್ದಹಾಗೆ ಭಾಸವಾಗುತ್ತದೆ. ಹಾಗೂ ಸದ್ದು ಗದ್ದಲವಂತೂ ಇನ್ನೂ ಜೋರೇ!.. ದಿನನಿತ್ಯದ ಕೆಲಸಕ್ಕೆ ಒಂದು ವಿರಾಮವನ್ನು ನೀಡಿ ಮನೆಯವರೆಲ್ಲ ಒಟ್ಟಾಗಿ ಮಾಡುವ ಖುಷಿಯೇ ಬೇರೆ. ಅದರಲ್ಲೂ ಅಜ್ಜ, ಅಜ್ಜಿ ಇದ್ದರಂತೂ ಮುಗೀತು ಅವರು ತಮ್ಮ ಹಳೆಯ ನೆನಪುಗಳನ್ನು ಮೇಲುಕು ಹಾಕುತ್ತಾ ಅವರು ತಮ್ಮ ಬಾಲ್ಯದ ಕಥೆಯನ್ನು ಮಕ್ಕಳಿಗೆ ಹೇಳುತ್ತಾ ಖುಷಿಪಡುತ್ತಿದ್ದರು.
ನಾಲ್ಕು ದಿನಗಳ ಬಿಸಿಲಿನಲ್ಲಿ ಹಪ್ಪಳ ಸಂಡಿಗೆಯನ್ನು ಒಣಗಿದ ಅನಂತರ ಜೋಡಿಸುತ್ತಿರುವಾಗ ಮಕ್ಕಳೆಲ್ಲ ಬಾಯಲ್ಲಿ ನೀರೂರಿಸಿ ತಿನ್ನಲು ಕಾತುರತೆಯಿಂದ ಕಾಯುವಾಗ ತಿಳಿಯದಂತೆ ಹಿರಿಯರು ಹಪ್ಪಳವನ್ನು ತಿನ್ನಲು ಹವಣಿಸುತ್ತಿದ್ದರು. ಮಳೆ ಶುರುವಾದ ಮೇಲಂತೂ ಕರಿದ ತಿಂಡಿ ತಿನ್ನಬೇಕೆನಿಸಿದಾಗಲೆಲ್ಲ ಹಪ್ಪಳವನ್ನು ಕರಿದು ತಿನ್ನುವ ಮಜಾವೇ ಬೇರೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಖಾದ್ಯಗಳನ್ನು ಹಳ್ಳಿ ಎಲ್ಲೆಡೆ ಕೆಲವು ಭಾಗಗಳಲ್ಲಿ ಕಾಣಬಹುದು, ಎಲ್ಲವೂ ಕೈಗೆ ಅತ್ಯಂತ ಸುಲಭವಾಗಿ ಸಿದ್ಧವಾಗಿ ಅಂಗಡಿಯಲ್ಲಿ ಸಿಗುತ್ತದೆ ಎಂದು ಮನೆಯಲ್ಲಿ ಮಾಡುವುದನ್ನೇ ಬಹಳ ಕಡಿಮೆಯಾಗಿದೆ. ಎಲ್ಲರೂ ಒಂದಾಗಿ ಸೇರಿ ಈ ರೀತಿಯ ತಿನಿಸುಗಳನ್ನು ಮಾಡಿ ತಮ್ಮ ಭಾಂದವ್ಯವನ್ನು ಇನ್ನೂ ಗಟ್ಟಿಯಾಗಿಸಿಕೊಳ್ಳುತ್ತಿದ್ದರು ಹಾಗೂ ಸಣ್ಣ ಮಕ್ಕಳಿಗೆ ತಮ್ಮ ಸಂಪ್ರದಾಯವನ್ನು ಈ ಮೂಲಕ ತಿಳಿಸುತ್ತಿದ್ದರು ಆದರೆ ಎಲ್ಲೋ ಒಂದೆಡೆ ಈ ಎಲ್ಲಾ ಒಗ್ಗಟ್ಟುಗಳು ಕ್ಷೀಣಿಸಿ ಹೋಗಿದೆ. ಆದರೆ ಎಲ್ಲವೂ ಮೊದಲಿನಂತೆ ಪುನಃ ಕಾಣಸಿಗುವುದು ಅಸಾಧ್ಯವೇ ಹೌದು.
- ಸಮೃದ್ಧಿ ಹೆಗ್ಡೆ
ಎಸ್‌ಡಿಎಂ, ಉಜಿರೆ