Advertisement

ನೆನಪುಗಳ ಕಹಾನಿ 

07:30 AM Mar 09, 2018 | Team Udayavani |

ಅದು ಸರಿಸುಮಾರು ವರ್ಷಗಳ ಹಿಂದಿನ ಸವಿನೆನಪುಗಳ ಕಹಾನಿ. ಆಗತಾನೆ ದ್ವಿತೀಯ ಪಿಯುಸಿಯ ಅಂತಿಮ ವರ್ಷದ ಫ‌ಲಿತಾಂಶ ಹೊರಬಿದ್ದ ಸಮಯ. ಮುಂದಿನ ಶಿಕ್ಷಣಕ್ಕಾಗಿ ಬಂದು ಸೇರಿದ್ದು ಕಡಲ ತೀರದ ಭಾರ್ಗವನ ಜನ್ಮಭೂಮಿಯಾದ ಕೋಟದ ಕಡಲ ತೀರದ ವಿದ್ಯಾ ದೇಗುಲಕ್ಕೆ. ಅಲ್ಲಿಂದ ಸರಿಸುಮಾರು ಮೂರು ವರ್ಷಗಳ ಕಾಲ ನನ್ನ ಮತ್ತು ನನ್ನ ಪ್ರೀತಿಯ ಸ್ನೆಹಿತರ ತರ್ಲೆ, ತಮಾಷೆ, ಶೈಕ್ಷಣಿಕ ಚಟುವಟಿಕೆಗಳಿಗೆ ಆಸರೆಯಾಗಿದ್ದು ಅದೇ ಕಡಲ ತೀರದ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ. ಬದಲಾವಣೆ ಪ್ರಕೃತಿ ನಿಯಮ ಎಂಬಂತೆ ನಮ್ಮ ಹೆಮ್ಮೆಯ ವಿದ್ಯಾದೇಗುಲ ಈಗ ಸಾಕಷ್ಟು ಬದಲಾವಣೆ ಮತ್ತು ಪ್ರಗತಿಯನ್ನು ಕಂಡು ಕೊಂಡಿದೆ. ಅಷ್ಟೇ ಅಲ್ಲದೆ ಸರಕಾರಿ ವಿದ್ಯಾಸಂಸ್ಥೆಯೊಂದು ಹೀಗೂ ಬೆಳೆಯಬಲ್ಲದು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಈ ಸಂಸ್ಥೆ ಎಂದರೆ ತಪ್ಪಿಲ್ಲ. ಒಂದು ಸಂಸ್ಥೆ  ತಳಮಟ್ಟದಿಂದ ಪ್ರಗತಿಯ ಹಾದಿಯತ್ತ ದಾಪುಗಾಲು ಹಾಕುತ್ತಾ ಅಭಿವೃದ್ಧಿ ಆಗುತ್ತಿರುವುದು ಅದು ಸುಲಭದ ಮಾತಲ್ಲ. ಜೊತೆಗೆ ದಿನ ಬೆಳಗಾಗುವುದರೊಳಗೆ ಸಂಭವಿಸುವ ಪವಾಡವಂತೂ ಅಲ್ಲವೇ ಅಲ್ಲ. ಅದು ಸತತ ಪರಿಶ್ರಮ, ಸಂಸ್ಥೆಯಲ್ಲಿನ ಗುರುವೃಂದ, ಸಿಬಂದ್ದಿಗಳು ಅಷ್ಟೇ ಅಲ್ಲದೆ ಊರ ಮಹನೀಯರ ತುಂಬು ಮನಸಿನ ಸಹಕಾರದ ಫ‌ಲಿತಂಶವೇ ಈ ವಿದ್ಯಾ ಸಂಸ್ಥೆ ಇಂದು ಇತರ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿದ್ದು ! ಶಿಕ್ಷಣ ಎಂದರೆ ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ ಗಂಟೆಗಳ ಕಾಲ ಪುಸ್ತಕದ ವಿಚಾರಗಳನ್ನು ತಲೆಗೆ ತುಂಬುವ ವಿದ್ಯಾರ್ಥಿಗಳನ್ನ ಅಂಕದ ಹಿಂದೆ ಕುರುಡರಂತೆ ಹಿಂಬಾಲಿಸಲು ಪ್ರೋತ್ಸಾಹಿಸುವ ಪ್ರಕ್ರಿಯೆಯಲ್ಲ . ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೇವಲ ಪುಸ್ತಕದ ಹುಳುವಾಗಿರದೆ ಅದರ ಹೊರತಾಗಿ ಚಿಂತಿಸುವ ಮತ್ತು ಮಾನವೀಯ ನಡತೆಗಳನ್ನ ಕಟ್ಟಿಕೊಳ್ಳುವ ಕಲೆಯನ್ನ ವಿದ್ಯಾರ್ಥಿಗಳಲ್ಲಿ ತುಂಬಬೇಕು. ಇಂತಹ ಶಿಕ್ಷಣ ನೀಡುವ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಈ ವಿದ್ಯಾಕೇಂದ್ರ ಒಂದು ಎನ್ನುವುದು ಹೆಮ್ಮೆಯ ವಿಚಾರ.

Advertisement

ನಾವು ಕೇವಲ ಪುಸ್ತಕ್ಕೆ ಅಂಟಿಕೊಳ್ಳದೆ ಅದರ ಹೊರತಾಗಿ ಹಲವು ಸಮಾಜಮುಖಿ ಮತ್ತು ಮನರಂಜನಾತ್ಮಕ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಕೇವಲ ಅಂಕಗಳಿಕೆ ಅಲ್ಲ ಅಂತ ಸಾರಿ ಹೇಳಿದವರು. ಅದಕ್ಕೆ ಉತ್ತಮ ಉದಾಹರಣೆಗಳೆಂದರೆ, ಆರೋಹದಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಸವಿಪಾಕ ಉಣ ಬಡಿಸಿದ್ದು, ಮಹಿಳಾ ಶೋಷಣೆ ವಿರುದ್ಧದ ಸಮಾಜಮುಖೀ ಕಾರ್ಯಕ್ರಮವಾದ ಸ್ಪಂದನ ಕಲಿಸಿದ ಗುರುಗಳನ್ನು ಮತ್ತೆ ಹಳೆಯ ಸವಿನೆನಪುಗಳನ್ನ ಮೆಲುಕು ಹಾಕಿದ ಪುರ್ನಮಿಲನ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಹೊನ್ನಿನ ಕೈಗನ್ನಡಿಯಾದ ವಾರ್ಷಿಕ ಸಂಚಿಕೆ ಕಡಲು. ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ಕಾಲೇಜು ಪಡೆದ ಬಹುಮಾನಗಳ ರಾಶಿ ಅಷ್ಟೇ ಯಾಕೆ ನಮ್ಮ ಸಂಸ್ಥೆಗೆ ದೊರೆತ “ನ್ಯಾಕ್‌ ಶ್ರೇಣಿ ಬಿ’ ನನ್ನ ಕಾಲೇಜಿಗೆ ಕಳಶಪ್ರಾಯ. ಹಲವು ಕಷ್ಟಗಳ ಸರಮಾಲೆಗಳನ್ನ ಮೀರಿನಿಂತು ಒಂದು ದಶಕ ಕಳೆದು ಇದೀಗ ಸಂಭ್ರಮದ ಕ್ಷಣಗಳಿಗೆ ಕಾತರಿಸುತಿದೆ. ಈ ಶೈಕ್ಷಣಿಕ ಸಂಸ್ಥೆಯ ಸರ್ವ ಯಶಸ್ವಿನ ಗುಟ್ಟು ಊರ ಮಹನೀಯರ ಸಹಕಾರ, ಪ್ರೀತಿ ತುಂಬಿದ ಗುರುಗಳು, ಕಾರ್ಯನಿರ್ವಹಿಸಿದ ಮತ್ತು ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳ ಉತ್ತಮ ಅಡಳಿತ, ಉತ್ತಮ ಸಿಬಂದ್ದಿ ವರ್ಗ ಮತ್ತು ವಿದ್ಯಾರ್ಥಿಗಳು. ಇಂಥ ವಿದ್ಯಾಸಂಸ್ಥೆಯಲ್ಲಿ  ನನ್ನ ಯಶಸ್ವಿ ಶೈಕ್ಷಣಿಕ ಜೀವನಕ್ಕೆ ಸಹಕರಿಸಿದ ಪ್ರೀತಿಯ ಗುರುಗಳು ಮತ್ತು ಪ್ರೀತಿಯ ಸ್ನೇಹಿತರು ಮತ್ತು ನನ್ನ ಪ್ರೀತಿಯ ವಿದ್ಯಾಸಂಸ್ಥೆಗೊಂದು ಈ ಮೂಲಕ ಪುಟ್ಟದೊಂದು ಅಕ್ಷರ ನಮನ.

ಶರತ್‌ ಕುಮಾರ್‌ ಶೆಟ್ಟಿ ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next